ಮಾರಿ ಜಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು, ಪ್ರಭುಲಿಂಗ ಕವಳಿಕಟ್ಟಿ, ಬಿ.ನಿಖಿಲ್, ವೀರೇಶ್‌ಕುಮಾರ್, ಡಾ. ಬೆನಕಪ್ರಸಾದ್ ಇತರರಿದ್ದರು.
ಸಾಗರ: ಸಾಗರದಲ್ಲಿ ೆ.3ರಿಂದ ಆರಂಭವಾಗುವ ಮಾರಿಕಾಂಬೆ ಜಾತ್ರೆಯಲ್ಲಿ ಮೂಲ ಸೌಕರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಸಿದ್ಧತೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಸಾಗರದ ಎಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಎಸ್ಪಿ, ಮೂವರು ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಮಾಡಿದರು.
20 ಸಮಿತಿಗಳಿಗೆ ಮೇಲುಸ್ತುವಾರಿಯಾಗಿ ನೇಮಕವಾಗಿರುವ ಅಧಿಕಾರಿಗಳು 9 ದಿನಗಳ ಕಾಲ ರಜೆ ಹಾಕುವಂತಿಲ್ಲ. ತುರ್ತು ಆರೋಗ್ಯ ಸೇವೆಗಾಗಿ ನಮ್ಮ ಕ್ಲಿನಿಕ್ ಘಟಕ ಎರಡು ಕಡೆ ಕೆಲಸ ಮಾಡಲಿದೆ. ಎರಡು ಆಂಬುಲೆನ್ಸ್ ಸೇವೆ ಇರುತ್ತದೆ. ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಪ್ರತಿದಿನ ಹೆಚ್ಚುವರಿ ಪೌರಕಾರ್ಮಿಕರ ನೇಮಿಸಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ಇರುತ್ತದೆ ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಾತ್ರೆಯನ್ನು ಅಧಿಕಾರಿಗಳು, ಸಾರ್ವಜನಿಕರು, ಸಮಿತಿಯವರು ಒಟ್ಟಾಗಿ ಅರ್ಥಪೂರ್ಣವಾಗಿ ಆಚರಿಸಬೇಕು. ಜಾತ್ರೆ ಯಶಸ್ಸಿಗೆ, ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ದೇವಿ ದರ್ಶನ ಸಂದರ್ಭ ಯಾವುದೇ ಗೊಂದಲ ಆಗದಂತೆ ಸಮಿತಿಯವರು ಗಮನ ಹರಿಸಬೇಕು. ವಯಸ್ಸಾದವರಿಗೆ, ಅಂಗವಿಕಲರಿಗೆ ವ್ಹೀಲ್‌ಚೇರ್ ವ್ಯವಸ್ಥೆಯನ್ನು ಸಮಿತಿ ಮಾಡಬೇಕು. ಆಗಾಗ ಭೇಟಿ ನೀಡಿ ಜಾತ್ರೆಯ ಮೇಲುಸ್ತುವಾರಿ ವಹಿಸಲಾಗುವುದು ಎಂದು ತಿಳಿಸಿದರು.
ಎಸ್ಪಿ ಬಿ.ನಿಖಿಲ್ ಮಾತನಾಡಿ, ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಜತೆಗೆ ಎರಡು ಕಡೆ ಸಹಾಯವಾಣಿ ತೆರೆಯಲಾಗುತ್ತದೆ. ಪಿಕ್‌ಪಾಕೆಟ್, ಸರಗಳ್ಳತನ ಸೇರಿ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತೇರು ಸಂಚರಿಸುವ ದಾರಿಯನ್ನು ಮತ್ತೊಮ್ಮೆ ಪರಿಶೀಲಿಸುತ್ತೇವೆ. ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಗಾಗಿ ಗಮನ ಹರಿಸಲಾಗುವುದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್, ಎಎಸ್ಪಿ ಡಾ. ಬೆನಕಪ್ರಸಾದ್, ತಹಸೀಲ್ದಾರ್ ರಶ್ಮಿ ಹಾಲೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಕಾರ್ಯದರ್ಶಿ ಗಿರಿಧರ ರಾವ್, ಸಮಿತಿ ಸಂಚಾಲಕರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.