ಸೊರಬ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಎಂ.ಕಿರಣ್‌ಕುಮಾರ್ ಮಾತನಾಡಿದರು. ಕೆ.ಆರ್.ಶಶಿಧರ್, ಶ್ರೀರಾಮ್ ಇದ್ದರು.
- ತಾಪಂ ಆಡಳಿತಾಧಿಕಾರಿ ಎಂ.ಕಿರಣ್‌ಕುಮಾರ್ ಸೂಚನೆ
- ಸೊರಬ ತಾಪಂನಲ್ಲಿ ಪ್ರಗತಿ ಪರಿಶೀಲನೆ ಸಭೆ
- ಔಷಧ ದಾಸ್ತಾನು ಮಾಡಿಕೊಳ್ಳಿ
ಸೊರಬ: ಮಳೆ ಮತ್ತು ಬಿಸಿಲು ಇರುವುದಿಂದ ಕಾಯಿಲೆಗಳು ಉಲ್ಬಣವಾಗುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಸಿದ್ಧತೆಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಎಂ.ಕಿರಣ್‌ಕುಮಾರ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಏರ್ಪಪಡಿಸಿದ್ದ ಪ್ರಗತಿ ಪರಿಶೀಲನೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಡೆಂೆ, ಚಿಕೂನ್‌ಗುನ್ಯಾ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇರುವುದರಿಂದ ನಿರ್ಲಕ್ಷೃ ಮಾಡುವಂತಿಲ್ಲ. ಅಗತ್ಯ ಔಷಧಗಳ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ವಿತರಿಸಲಾಗುತ್ತಿದೆ. ರಸಗೊಬ್ಬರ ಕೊರತೆ ಇರುವುದಿಲ್ಲ. ಸಾಗುವಳಿ ಮತ್ತು ಬೆಳೆ ದೃಢೀಕರಣ ಪಡೆದು ಗೊಬ್ಬರ ನೀಡಬೇಕು. ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಿಗೆ ಕೊಳೆರೋಗ ಬರುತ್ತವೆ. ರೈತರು ಮುಂಜಾಗ್ರತೆ ವಹಿಸಿ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಬರದ ಛಾಯೆ ಇದ್ದು, ಕುಡಿಯುವ ನೀರಿನ ಕೊಳವೆ ಬಾವಿಗಳ ಬಳಿ ನೀರು ಇಂಗುವಂತೆ ಕಾಮಗಾರಿ ಮಾಡುವ ಮೂಲಕ ಅಂತರ್ಜಲ ವೃದ್ಧಿಸಬೇಕು ಎಂದರು.
ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್ ಮಾತನಾಡಿ, ಪರಿಶಿಷ್ಟ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕ ಮತ್ತು ಎಲ್ಲ ವರ್ಗದ ರೈತರಿಗೆ ಪಿವಿಸಿ ಪೈಪ್ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಹಿಂದೆ ಸವಲತ್ತು ಪಡೆಯದ ರೈತರು ಅವಕಾಶ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಸಾಮಾಜಿಕ ಅರಣ್ಯ ಅಧಿಕಾರಿ ಜಗದೀಶ್ ಮಾತನಾಡಿ, ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಡುತೋಪು ಬೆಳಸುವ ಗುರಿ ಹೊಂದಲಾಗಿದೆ. ರೈತರಿಂದಲೂ ಗಿಡಗಳಿಗೆ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸಸಿಗಳನ್ನು ಬೆಳಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಇಒ ಕೆ.ಆರ್.ಶಶಿಧರ, ತಾಪಂ ಸಹಾಯಕ ನಿರ್ದೇಶಕ ಶ್ರೀರಾಮ್ ಉಪಸ್ಥಿತರಿದ್ದರು.
ಸೊರಬ ತಾಲೂಕಿನಲ್ಲಿ ಮುಂಗಾರಿನ ವಾಡಿಕೆ ಮಳೆಗಿಂತ ಕಡಿಮೆಯಾಗಿದೆ. 5,260 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಮತ್ತು 4,460 ಹೆಕ್ಟೇರ್ ಭತ್ತ ಬಿತ್ತನೆ ಆಗಿದೆ. ಮುಸುಕಿನ ಜೋಳ ಇತ್ತೀಚಿನ ಮಳೆಯಿಂದ ಚೇತರಿಕೆ ಕಂಡಿದೆ. ಭತ್ತದ ಸಸಿಮಡಿ ಆಗಿದ್ದು, ತಾಲೂಕಿನ ಕೆರೆಗಳಲ್ಲಿ ನೀರು ಕೊರತೆ ಇದೆ. ತಡವಾಗಿ ಬಿತ್ತನೆಯಾದ ಮುಸುಕಿನ ಜೋಳದಲ್ಲಿ ಕೀಟಬಾಧೆ ಆಗುವ ಸಾಧ್ಯತೆ ಇರುವುದರಿಂದ ತಾಂತ್ರಿಕ ಮಾಹಿತಿ ನೀಡಲಾಗಿದೆ ಎಂದು ಎಂ.ಕಿರಣ್‌ಕುಮಾರ್ ತಿಳಿಸಿದರು.