ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಮೂರು ದಿನದ ರಾಜ್ಯಮಟ್ಟದ ತಜ್ಞ ವೈದ್ಯರ ಸಮ್ಮೇಳನವನ್ನು ಮಧು ಬಂಗಾರಪ್ಪ ಉದ್ಘಾಟಿಸಿದರು. ಡಾ. ರಮಣಪುರಿ, ಡಾ. ಬಿ.ಆರ್.ಮಹೇಶ್‌ಮೂರ್ತಿ, ಡಾ. ವಿರೂಪಾಕ್ಷಪ್ಪ ಇತರರಿದ್ದರು. 
ಶಿವಮೊಗ್ಗ

ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ I doctors service

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಮತ
  • ರಾಜ್ಯ ಮಟ್ಟದ ಸಮ್ಮೇಳನ ಕಾಪಿಕಾನ್‌ಗೆ ಚಾಲನೆ
  • ವೈದ್ಯರು ಜನರ ಜತೆ ಸೌಹಾರ್ದ ರೀತಿ ವರ್ತಿಸಲಿ
ಶಿವಮೊಗ್ಗ: ಕರೊನಾ (carona) ದ ಸಂದಿಗ್ಧ ಪರಿಸ್ಥಿತಿಯಲ್ಲೂ ಜೀವನವನ್ನೇ ಪಣಕ್ಕಿಟ್ಟು, ಧೈರ್ಯವಾಗಿ ಕಾರ್ಯನಿರ್ವಹಿಸಿದ್ದು ವೈದ್ಯರು. ಅಂದು ವೈದ್ಯರು (docros) ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಅನೇಕರು ಸಾವಿನ ದವಡೆಯಿಂದ ಹೊರಬಂದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhu bangarappa) ಹೇಳಿದರು.
ಸಿಮ್ಸ್ (ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ), ಎಪಿಐ (ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯಾ) ಸಹ್ಯಾದ್ರಿ ಶಾಖೆಯಿಂದ ಸಿಮ್ಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ತಜ್ಞ ವೈದ್ಯರ ಮೂರು ದಿನಗಳ ಸಮ್ಮೇಳನ ಕಾಪಿಕಾನ್-2026ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಸ್ವಾಸ್ಥೃ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ. ವೈದ್ಯರೆಂದರೆ ಆಸ್ಪತ್ರೆಗಳಲ್ಲಿರುವ ಸಾಕ್ಷಾತ್ ದೇವರು ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಅದಕ್ಕೆ ತಕ್ಕಂತೆ ವೈದ್ಯರು ಕಾರ್ಯನಿರ್ವಹಿಸಬೇಕು. ರೋಗಿಯೊಂದಿಗೆ ಸೌಹಾರ್ದವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಮೆಗ್ಗಾನ್ ಆಸ್ಪತ್ರೆಯನ್ನು ಸಿಮ್ಸ್‌ಗೆ ಸೇರಿಸಿದ್ದರಿಂದ ಬಹಳಷ್ಟು ಅನುಕೂಲವಾಗಿದೆ. ರಾಜ್ಯ, ಕೇಂದ್ರ ಸರ್ಕಾರಗಳಿಂದ ದೊರೆತ ಅನುದಾನದಿಂದ ಆಸ್ಪತ್ರೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ, ಡಯಾಲಿಸಿಸ್, ಹೊರ ರೋಗಿಗಳ ವಿಭಾಗ ಸೇರಿ ಎಲ್ಲ ವಿಭಾಗಗಳೂ ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದರು.
ಸಿಮ್ಸ್ ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳ ರೋಗಿಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳ 23 ತಾಲೂಕುಗಳ ರೋಗಿಗಳಿಗೆ ಸಹಕಾರಿಯಾಗಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇಲ್ಲಿನ ವೈದ್ಯರಿಗೆ, ಸಿಬ್ಬಂದಿಗೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಬಗೆಹರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಎಪಿಐ ಅಧ್ಯಕ್ಷ ಡಾ. ರಮಣಪುರಿ, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಪ್ರಮುಖರಾದ ಡಾ. ಎಸ್.ಬಿ.ಹೆಗಡೆ, ಡಾ. ಬಿ.ಸಿ.ಪೃಥ್ವಿ, ಡಾ. ಬಿ.ಆರ್.ಮಹೇಶ್‌ಮೂರ್ತಿ, ಡಾ. ಶ್ರೀಕಾಂತ್ ಎನ್.ಹೆಗಡೆ, ಡಾ. ಬಿ.ರಮೇಶ್, ಡಾ. ನರಸಿಂಹಲು , ಡಾ.ನಂದಿನಿ ಚಟರ್ಜಿ ಇತರರಿದ್ದರು.
"

ಮೂರು ದಿನದ ವೈದ್ಯರ ಸಮ್ಮೇಳನದಲ್ಲಿ ನಿಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿ. ಇಲ್ಲಿ ನಡೆಯುವ ಚರ್ಚೆ, ನಿರ್ಣಯಗಳನ್ನು ನನಗೆ ತಿಳಿಸಬೇಕು. ನಿರ್ಣಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿರಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದು ಸರ್ಕಾರದ ಜವಾಬ್ದಾರಿಯೂ ಕೂಡ.

— ಮಧು ಬಂಗಾರಪ್ಪ, ಶಿಕ್ಷಣ ಸಚಿವ

"

ಈ ಸಮ್ಮೇಳನದಲ್ಲಿ ಒಂದು ಸಾವಿರ ಸಂಶೋಧನಾ ಲೇಖನಗಳು ಮಂಡನೆಯಾಗಲಿವೆ. 700 ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು, 350ಕ್ಕೂ ಹೆಚ್ಚು ವೈದ್ಯರು ತಮ್ಮ ವಿದ್ವತ್‌ಪೂರ್ಣ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವರು. ಸಮಕಾಲೀನ ವೈದ್ಯಕೀಯ ಸಮಸ್ಯೆ, ಹೃದ್ರೋಗ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇತ್ಯಾದಿಗಳ ಕುರಿತು ಚರ್ಚೆ ನಡೆಯಲಿದೆ.

— ಡಾ. ರಮಣಪುರಿ ಎಪಿಐ ಅಧ್ಯಕ್ಷ