ಎಂಎಡಿಬಿ ಅನುದಾನದಲ್ಲಿ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮದಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಉದ್ಘಾಟಿಸಿದರು. ಶಚ್ಚೀಂದ್ರ ಹೆಗ್ಡೆ, ಸುಂದರೇಶ್, ಶಶಾಂಕ ಹೆಗ್ಡೆ, ಮಹಾಬಲೇಶ್ ಇತರರಿದ್ದರು. 
ಶಿವಮೊಗ್ಗ

ಪ್ರವಾಸಿಗರಿಗೆ ಕಿರಿಕಿರಿ ಮಾಡಬೇಡಿ | shelters Inauguration

ಶಿವಕುಮಾರ ಎಸ್.ಪಿ.
ತೀರ್ಥಹಳ್ಳಿ: ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಮಲೆನಾಡು ಪ್ರವಾಸೋದ್ಯಮಕ್ಕೆ ಅತ್ಯಂತ ಪ್ರಶಸ್ತವಾದ ತಾಣ. ಪರಿಸರ ರಕ್ಷಣೆಯ ನೆಪದಲ್ಲಿ ಈ ಭಾಗಕ್ಕೆ ಆಗಮಿಸುವ ಪ್ರವಾಸಿಗರಿಗೆ ವಾಸ್ತವ್ಯ, ಛಾಯಾಗ್ರಹಣ ಮತ್ತಿತರ ವಿಚಾರಗಳಲ್ಲಿ ಅಸಹನೀಯ ವಾತಾವರಣ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಎಂಎಡಿಬಿ ಅನುದಾನದಲ್ಲಿ ನಾಲೂರು ಮತ್ತು ಜೇಡಿಕುಣಿ ಗ್ರಾಮಗಳಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಿಂದ ಹೊರಗಿದ್ದ ತೀರ್ಥಹಳ್ಳಿ ತಾಲೂಕನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ತರಲಾಗಿದೆ ಎಂದರು.
ವಿಶೇಷವಾಗಿ ಆಗುಂಬೆ ಹೋಬಳಿಯ ಪರಿಸರ, ಜಲಪಾತಗಳು, ಕಾಳಿಂಗ ಸರ್ಪಗಳ ತಾಣ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ತಾಣಗಳು. ಪ್ರವಾಸೋದ್ಯಮಕ್ಕೆ ಪೂರಕವಾಗಿ ನಡೆಯುತ್ತಿರುವ ಹೋಂಸ್ಟೇಗಳು ಪರಿಸರದ ರಕ್ಷಣೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಪರಿಸರ ಕಾಯ್ದೆ ನೆಪದಲ್ಲಿ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುವ ಕ್ರಮ ಸರಿಯಲ್ಲ. ಇಂತಹ ಬೆಳವಣಿಗೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ತಿಳಿಸಿದರು.
ಪಟ್ಟಣದ ರಾಮೇಶ್ವರ ದೇವಸ್ಥಾನದ ಬಳಿ ತುಂಗಾನದಿಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಎಂಎಡಿಬಿಯಿಂದ 3.50 ಕೋಟಿ ರೂ. ಅನುದಾನ ಮಂಜೂರಾಗಿದೆ. ತಾಲೂಕು ಆಸ್ಪತ್ರೆ ಆವರಣದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಆಶ್ರಯ ತಾಣ ನಿರ್ಮಾಣ ಸೇರಿ 12 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಈ ಭಾಗದ ಐತಿಹಾಸಿಕ, ಪ್ರವಾಸಿ ತಾಣಗಳ ಚಿತ್ರಗಳನ್ನು ತಂಗುದಾಣಗಳಲ್ಲಿ ಚಿತ್ರಿಸಲಾಗಿದೆ ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಜಿಪಂ ಮಾಜಿ ಸದಸ್ಯ ಸುಂದರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಹಾಬಲೇಶ್, ಶಶಾಂಕ ಹೆಗ್ಡೆ, ಬಿ.ಆರ್.ರಾಘವೇಂದ್ರ ಶೆಟ್ಟಿ, ಸಂದೀಪ್, ನಾಲೂರು ಪಿಡಿಒ ನವೀನ್ ಇತರಿದ್ದರು.