ಸಾಗರದ ವಿನೋಬಾ ನಗರ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ. ಮಾತನಾಡಿದರು. 
ಶಿವಮೊಗ್ಗ

ಅಂಗವಿಕಲ ಮಕ್ಕಳ ಕೀಳರಿಮೆ ದೂರಮಾಡಿ | disabled day

ಸಾಗರ: ಅಂಗವಿಕಲ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು. ಮಕ್ಕಳ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಬೇಕು ಎಂದು ಬಿಇಒ ಪರಶುರಾಮಪ್ಪ ಹೇಳಿದರು.
ನಗರದ ವಿನೋಬನಗರ ಶಾಲೆಯಲ್ಲಿ ಬುಧವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳಲ್ಲಿ ಸಾಕಷ್ಟು ಪ್ರತಿಭಾವಂತರು ಇರುತ್ತಾರೆ. ಅಂತಹ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಪಾಲಕರು ಪ್ರಯತ್ನಿಸಬೇಕು. ಅವರನ್ನು ಪ್ರೋತ್ಸಾಹಿಸುವ ಜತೆಗೆ ಅವರಲ್ಲಿನ ಕೀಳರಿಮೆ ದೂರ ಮಾಡಬೇಕು. ಸರ್ಕಾರ ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಅಂಗವೈಕಲ್ಯವನ್ನು ಮೀರಿ ವಿಶ್ವಮಟ್ಟದಲ್ಲಿ ಬೆಳೆದ ಸಾಕಷ್ಟು ಸಾಧಕರಿದ್ದಾರೆ. ಅವರ ಸಾಧನೆ ಇಂತಹ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಅಂಗವಿಕಲ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರು ಸದಾಕಾಲ ಕ್ರಿಯಾಶೀಲರಾಗಿರುತ್ತಾರೆ. ಶಾಲೆಗಳಲ್ಲಿ ಅವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಾಲಕರು ಮಕ್ಕಳ ಲಾಲನೆ ಪಾಲನೆ ಮಾಡುವ ಜತೆಗೆ ಅವರು ಶಿಕ್ಷಣ ಪಡೆಯಲು ಸಹಕಾರ ನೀಡಬೇಕು ಎಂದು ಹೇಳಿದರು.
ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಕುಮಾರಸ್ವಾಮಿ, ಎ.ಶರಣಪ್ಪ, ಹನುಮಂತಪ್ಪ, ಜ್ಯೋತಿ ರೀನಾ ಅಂದ್ರಾದೆ ಇತರರಿದ್ದರು. ನಂತರ ಅಂಗವಿಕಲ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದವು.