ಶಿವಮೊಗ್ಗದ ಚಿನ್ನಾಭರಣ ಮಾರಾಟ ಮಳಿಗೆಯೊಂದರಲ್ಲಿ ಸೋಮವಾರ ಅಕ್ಷಯ ತೃತೀಯಾ ಅಂಗವಾಗಿ ಚಿನ್ನಾಭರಣ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು.
- ಚಿನ್ನಾಭರಣ ವ್ಯಾಪಾರ ವಹಿವಾಟಿನಲ್ಲಿ ಕುಸಿತ
- ದರ ಏರಿಕೆಯಿಂದ ಗ್ರಾಹಕರಲ್ಲಿ ನಿರಾಸಕ್ತಿ
ಶಿವಮೊಗ್ಗ: ಪ್ರತಿ ವರ್ಷದ ಅಕ್ಷಯ (akshaya) ತೃತೀಯಾಕ್ಕಿಂತ ಈ ಬಾರಿ ಜಿಲ್ಲೆಯಲ್ಲಿ ಚಿನ್ನಾಭರಣ (jewellary) ವ್ಯಾಪಾರಿಗಳು ತುಂಬ ನಿರಾಸೆ ಅನುಭವಿಸಬೇಕಾಯಿತು. ಎಂದಿಗಿಂತಲೂ ಅಕ್ಷಯ ತೃತೀಯಾದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿರುತ್ತದೆ. ಚಿನ್ನಾಭರಣ ವ್ಯಾಪಾರಿಗಳ ಖುಷಿ ಅಕ್ಷಯವಾಗುತ್ತಿತ್ತು. ಆದರೆ ಈ ವರ್ಷ ಆಭರಣದ ಅಂಗಡಿಗಳಲ್ಲಿ (stores) ಅದಕ್ಕೆ ತದ್ವಿರುದ್ಧ ಪರಿಸ್ಥಿತಿ ಇತ್ತು.
ಮೂರು ವರ್ಷದಿಂದ ಅಕ್ಷಯ ತೃತೀಯಾದಲ್ಲಿ ಚಿನ್ನಾಭರಣ ಮಾರಾಟದ ವಹಿವಾಟು ಚೇತರಿಕೆ ಹಾದಿಯಲ್ಲಿತ್ತು. ಈ ಬಾರಿಯೂ ಅದೇ ಸ್ಥಿತಿ ಮುಂದುವರಿಯಲಿದೆ ಎಂಬ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಗಿದೆ. ಆನ್‌ಲೈನ್ ಮೂಲಕ ಚಿನ್ನ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದು ಕೆಲವೇ ಕಾರ್ಪೋರೇಟ್ ಚಿನ್ನಾಭರಣ ಮಳಿಗೆಗೆ ಸೀಮಿತವಾಗಿತ್ತು. ಈ ವರ್ಷ ಕಾರ್ಪೋರೇಟ್ ಕಂಪನಿಗಳೂ ಸೇರಿ ಚಿಕ್ಕಪುಟ್ಟ ವ್ಯಾಪಾರಿಗಳು ಕೂಡ ಈ ಬಾರಿ ನಿರಾಸೆ ಅನುಭವಿಸಿದರು.
ಕೆಲ ಕಾರ್ಪೋರೇಟ್ ಕಂಪನಿಗಳ ಚಿನ್ನಾಭರಣ ಮಳಿಗೆಯಲ್ಲಿ ಖರೀದಿ ಮೇಲೆ ವಿಶೇಷ ರಿಯಾಯಿತಿ ಘೋಷಣೆ ಮಾಡಲಾಗಿತ್ತು. ಕೆಲ ಆಭರಣ ಮಳಿಗೆಗಳಲ್ಲಿ ಗ್ರಾಹಕರಿಗೆಂದು ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ನೆಹರು ರಸ್ತೆ, ಗಾಂಧಿಬಜಾರ್, ದುರ್ಗಿಗುಡಿ, ಬಾಲರಾಜ್ ಅರಸ್ ರಸ್ತೆ ಭಾಗಗಳ ಚಿನ್ನಾಭರಣ ಅಂಗಡಿಗಳಲ್ಲಿ ಹೊಸ ಡಿಸೈನ್‌ಗಳನ್ನು ಇರಿಸಲಾಗಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಚಿನ್ನ ಖರೀದಿಸಲಿಲ್ಲ.
ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜ್ಯೂವೆಲ್ಲರಿ ಶಾಪ್‌ಗಳಿದ್ದು, 8 ಕಾರ್ಪೋರೇಟ್ ಸಂಸ್ಥೆಗಳಿವೆ. ಎರಡು ಸಾವಿರಕ್ಕೂ ಅಧಿಕ ಆಭರಣ ತಯಾರಕರು ಜಿಲ್ಲೆಯಲ್ಲಿದ್ದಾರೆ. ಇವರೆಲ್ಲರೂ ಹೆಚ್ಚು ನಿರೀಕ್ಷೆಯಿಂದ ಕಾಣುವುದು ಅಕ್ಷಯ ತೃತೀಯಾ. ಈ ದಿನ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಖರೀದಿಸಿದರೆ ಒಳ್ಳೆಯದು. ಈ ದಿನದಂದು ಏನೇ ಒಳ್ಳೆಯ ಕೆಲಸ ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಈ ವರ್ಷ ಚಿನ್ನ ಹಾಗೂ ಬೆಳ್ಳಿ ದರ ವಿಪರೀತ ಏರಿಕೆ ಆಗಿರುವುದರಿಂದ ಚಿನ್ನಾಭರಣಗಳ ಮಾರಾಟ ಪ್ರಮಾಣ ಕುಸಿದಿದೆ. ಅಕ್ಷಯ ತೃತೀಯಾದಂದು 10 ಗ್ರಾಂ ಚಿನ್ನ ಖರೀದಿಸುತ್ತಿದ್ದವರು ಈ ವರ್ಷ ಮೂಗುಬೊಟ್ಟು ಖರೀದಿಸಿ ಶಾಸ್ತ್ರ ಪೂರೈಸಿದ್ದಾರೆ ಎಂದು ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.