ಸಾಗರ: ಕ್ಷೇತ್ರಕ್ಕೆ ಸಚಿವ ಸ್ಥಾನ ಬೇಕು. ಆದರೆ ಸಚಿವ ಸ್ಥಾನಕ್ಕಾಗಿ ಮೂರು ತಿಂಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲೇ ಠಿಕಾಣಿ ಹೂಡುವುದು ಎಷ್ಟು ಸರಿ? ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಗಮನ ಹರಿಸುವುದು ಅತಿಮುಖ್ಯ ಎಂಬುದನ್ನು ಅವರು ತಿಳಿದುಕೊಳ್ಳದಿರುವುದು ದುರದೃಷ್ಟಕರ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಟೀಕಿಸಿದರು.
ಸಾಗರದಲ್ಲಿ ಬುಧವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರು ಶಾಸಕ ಸ್ಥಾನ ನೀಡಿದಾಗ ಅದನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸಚಿವ ಸ್ಥಾನಕ್ಕಾಗಿ ಕ್ಷೇತ್ರ ಮರೆತರೆ ಮತದಾರರಿಗೆ ಅವಮಾನ ಮಾಡಿದಂತೆ ಎಂದರು.
ಈ ಹಿಂದೆ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಎಲ್.ಟಿ.ತಿಮ್ಮಪ್ಪ ಹೆಗಡೆ, ಧರ್ಮಪ್ಪ ಅವರಿಗೆ ಮೊದಲು ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೂ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು. ಆರಂಭದಲ್ಲಿ ಬಿತ್ತನೆ ಮಾಡಿ ಮಳೆ ಬಾರದೆ ಕೈಸುಟ್ಟುಕೊಂಡಿದ್ದ ರೈತರಿಗೆ ಇದೀಗ ವಿಪರೀತ ಮಳೆಯಿಂದ ಇನ್ನೊಂದು ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮನೆಬಿದ್ದು ಜನರು ನಿರಾಶ್ರಿತರಾಗಿದ್ದಾರೆ. ಅಡಿಕೆಗೆ ಕೊಳೆರೋಗ ಬಂದು ಬೆಳೆಗಾರರು ಆತಂಕದಲ್ಲಿದ್ದಾರೆ. ಇಂತಹ ಹೊತ್ತಿನಲ್ಲಿ ಕ್ಷೇತ್ರದಲ್ಲಿದ್ದು, ಅಧಿಕಾರಿಗಳ ಸಭೆ ನಡೆಸಿ ತುರ್ತು ಪರಿಹಾರ ಕೊಡಬೇಕಾಗಿತ್ತು. ಆದರೆ ಕ್ಷೇತ್ರದತ್ತ ಗಮನಹರಿಸದೇ ಇರುವುದು ಸರಿಯಲ್ಲ ಎಂದರು.
ಈ ವಯಸ್ಸಿನಲ್ಲಿಯೂ ಕಾಗೋಡು ತಿಮ್ಮಪ್ಪ ಅವರು ಮಳೆ, ಬೆಳೆ, ಅತಿವೃಷ್ಟಿಯಿಂದ ಆಗಿರುವ ತೊಂದರೆ ಇನ್ನಿತರೆ ಮಾಹಿತಿ ಪಡೆದರು. ಸದ್ಯದಲ್ಲಿಯೇ ಮಾಜಿ ಸಚಿವ ಹರತಾಳು ಹಾಲಪ್ಪ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮುಂದಿನ ಬಾರಿ ಜನರ ಕೆಲಸ ಮಾಡುವಂತಹ ಶಾಸಕರು ಬರಲಿ ಎಂದು ಹೇಳಿದರು.
ನಿಂಗಪ್ಪ ಬೆಳಂದೂರು, ಸುಧಾಕರ ಕುಗ್ವೆ ಹಾಜರಿದ್ದರು.