ಕಾರ್ಗಲ್‌ನ ಶ್ರೀಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧವೀರ ಸ್ವಾಮೀಜಿ ಆಶೀರ್ವಚನ ನೀಡಿದರು. ಗೋಪಾಲಕೃಷ್ಣ ಬೇಳೂರು, ಹರತಾಳು ಹಾಲಪ್ಪ, ದಿನೇಶ್ ಆರೋಡಿ, ಗಿರೀಶ್, ಬಿ.ಸಿ.ಲಕ್ಷ್ಮೀನಾರಾಯಣ್, ಮೋಹನ್‌ಕುಮಾರ್, ಲಕ್ಷ್ಮೀ ರಾಜು ಇತರರಿದ್ದರು. 
ಶಿವಮೊಗ್ಗ

ಧರ್ಮಸ್ಥಳ ಯೋಜನೆಯಿಂದ ಗ್ರಾಮೀಣ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಳ

ಟಿ.ಎಚ್.ಸಂತೋಷ್ ಕುಮಾರ್
ಕಾರ್ಗಲ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲೀಕರಣವಾಗಿವೆ. ಜತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಗಲ್ ವಲಯದ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಪೂಜಾ ಸಮಿತಿಯಿಂದ ಸೋಮವಾರ ಏರ್ಪಡಿಸಿದ್ದ ವಲಯ ಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ
ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲವು ದುಷ್ಟ ಶಕ್ತಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಪ್ರಯತ್ನಿಸಿದ್ದಾರೆ. ಆದರೆ ದೇವರ ಸಾನ್ನಿಧ್ಯವಿರುವ ಇಂತಹ ಕ್ಷೇತ್ರಕ್ಕೆ ಮಸಿ ಬಳಿಯಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಸರ್ಕಾರ ಕೂಡಾ ತನಿಖೆಯನ್ನು ಎಸ್‌ಐಟಿಗೆ ನೀಡಿ ಪಿತೂರಿ ಮಾಡಿದವರನ್ನು ಬಂಸುವ
ಕೆಲಸ ಮಾಡಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ. ಪ್ರಮುಖವಾಗಿ ಸುಜ್ಞಾನ
ನಿಯಡಿ 1.18 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಮಾತೃಶ್ರೀ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಇಲ್ಲದ ಬಡವರಿಗೆ ಉಚಿತವಾಗಿ ಮನೆ ನಿರ್ಮಿಸಿ ಕೊಡುವ ಕೆಲಸ ಮಾಡಲಾಗಿದೆ. ಸಮಾಜದ ಸುಮಾರು 70 ಸಾವಿರ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಪೌಷ್ಟಿಕಾಂಶದ ಕೊರತೆ ನೀಗಿಸುವ ನಿಟ್ಟಿನಲ್ಲಿ
ಯೋಜನೆ ರೂಪಿಸಿ 18 ಸಾವಿರ ಮಂದಿಗೆ ವಾತ್ಸಲ್ಯ ಕಿಟ್ ನೀಡಲಾಗಿದೆ. 16990 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದ್ದಾರೆ. ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀಮನ್ನಿರಂಜನ ಪ್ರಣವ ಪೀಠಾೀಶ್ವರ ಶ್ರೀ ಸಿದ್ಧವೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಲಯದ ಸಾಧನೆಗಳ ವರದಿಯನ್ನು ಮೇಲ್ವಿಚಾರಕಿ ಕುಸುಮಾ ಮಂಡಿಸಿದರು. ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ದಿನೇಶ್ ಆರೋಡಿ, ತಾಲೂಕು
ಯೋಜನಾಕಾರಿ ಗಿರೀಶ್, ತಾಪಂ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷ್ಮೀನಾರಾಯಣ್, ಪಿಎಸಿಎಸ್ ಅಧ್ಯಕ್ಷ ಮೋಹನ್‌ಕುಮಾರ್ ಬಿದರೂರು, ಪ್ರಮುಖರಾದ ಮೋಹನ್ ಎಂ. ಪೈ, ಲಕ್ಷ್ಮೀ ರಾಜು, ಎಂ.ರಾಜು, ಅಣ್ಣಾದೊರೆ, ನಾಗರಾಜ್, ಎಂ.ಪಿ.ಲೋಕರಾಜಾ ಮರಬಿಡಿ ಇತರರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಪ್ರಗತಿ ಮಾತ್ರವಲ್ಲ, ಆತ್ಮವಿಶ್ವಾಸ ಹೆಚ್ಚಿಸಿದೆ. ಯೋಜನೆಯ ಇಂತಹ ಪೂಜಾ ಕಾರ್ಯಗಳಿಂದ ಎಲ್ಲರೂ ಒಟ್ಟಿಗೆ ಸೇರುವುದರಿಂದ ಜನರಲ್ಲಿನ ಭಾವನಾತ್ಮಕ ಸಂಬಂಧ ಬೆಳೆಯಲು
ಸಹಕಾರಿಯಾಗಿದೆ. ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಪೂಜೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮನಸ್ಸಿನ ನೆಮ್ಮದಿ, ಸಂಸ್ಕಾರ ಬೆಳೆಯಲು ಅವಕಾಶ.
ಹರತಾಳು ಹಾಲಪ್ಪ, ಮಾಜಿ ಸಚಿವ