ಶಿರಾಳಕೊಪ್ಪ ಹತ್ತಿರದ ನೇರಲಗಿ ವೀರಭದ್ರೇಶ್ವರ ಸ್ವಾಮಿ ಶರಭಿ ಗುಗ್ಗುಳ ಹಾಗೂ ಜಾತ್ರೆಯಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಭಾಗವಹಿಸಿದ್ದರು.
ಶಿರಾಳಕೊಪ್ಪ: ನೇರಲಗಿ ವೀರಭದ್ರೇಶ್ವರ ಶರಭಿ ಗುಗ್ಗುಳ ಹಾಗೂ ಬಸವೇಶ್ವರ ರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು. ಸೋಮವಾರ ಬೆಳಗ್ಗೆ ಹೂವಿನ ರಥೋತ್ಸವ ಜರುಗಿತು.
ನಸುಕಿನಲ್ಲೇ ಬಸವೇಶ್ವರ ದೇವಸ್ಥಾನದಿಂದ ಹೊರಟ ಗುಗ್ಗುಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇದೇ ವೇಳೆ ಬೆಲವಂತನಕೊಪ್ಪ ಮತ್ತು ನೇರಲಗಿ ಗ್ರಾಮಗಳಿಂದ ಏಕಕಾಲದಲ್ಲಿ ನಾಲ್ಕು ಗುಗ್ಗುಳ ತಂಡಗಳು ಹೊರಟು ಮಧ್ಯಾಹ್ನ 1.30ರ ಸುಮಾರಿಗೆ ನೇರಲಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿದವು.
ಶರಭಿ ಗುಗ್ಗುಳ ಆಗಮಿಸಿದ ಬಳಿಕ ಬಸವೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಎಲ್ಲ ವರ್ಗದ ಜನರು ಉತ್ಸಾಹದಿಂದ ಭಾಗವಹಿಸಿದ್ದರು. ವಿಶೇಷವಾಗಿ ಭೋವಿ ಸಮಾಜದ ಭಕ್ತರು ವೀರಭದ್ರೇಶ್ವರನಿಗೆ ಸಲ್ಲಿಸುವ ಸೇವೆ ಗಮನಸೆಳೆಯಿತು.
ಕೆಳದಿ ಅರಸರ ಕಾಲದಲ್ಲಿ ಪ್ರತಿಷ್ಠಾಪಿತವಾಗಿರುವ ವೀರಭದ್ರೇಶ್ವರನಿಗೆ ಹರಿಕೆ ಕಟ್ಟಿಕೊಂಡ ಭಕ್ತರು ಜಾತ್ರಾ ಸಂದರ್ಭದಲ್ಲಿ ತೀರಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಸಂಜೆ ನಡೆದ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಗೆ ಮತ್ತಷ್ಟು ಮೆರುಗು ತಂದರು.