ತೀರ್ಥಹಳ್ಳಿಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತುಂಗಾ ನದಿಯಲ್ಲಿರುವ ರಾಮಕೊಂಡದಲ್ಲಿ ಭಕ್ತರು ತೀರ್ಥಸ್ನಾನ ಮಾಡಿದರು.
ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನವಾದ ಶುಕ್ರವಾರ ತುಂಗಾ ನದಿಯಲ್ಲಿರುವ ರಾಮಕೊಂಡದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತರು ತೀರ್ಥಸ್ನಾನ ಮಾಡಿ ಶ್ರೀ ರಾಮೇಶ್ವರ ದೇವರ ದರ್ಶನ ಪಡೆದರು.
ಮುಂಜಾನೆ ರಾಮಕೊಂಡದಲ್ಲಿ ದೇವರ ಉತ್ಸವ ಮೂರ್ತಿ ಪೂಜೆ ನಂತರ ಆರಂಭವಾದ ತೀರ್ಥಸ್ನಾನಕ್ಕೆ ಮಧ್ಯಾಹ್ನ ಒಂದು ಗಂಟೆವರೆಗೂ ಸರತಿ ಸಾಲು ಇತ್ತು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದ ಕಾರಣ ಜನರ ಸುರಕ್ಷೆ ದೃಷ್ಟಿಯಿಂದ ವಿಶೇಷ ವ್ಯವಸ್ಥೆ ಹಾಗೂ ಬಂದೋಬಸ್ತ್ ಕಲ್ಪಿಸಲಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದವರ ಮತ್ತು ಪೋಲಿಸರು ಸ್ಥಳದಲ್ಲಿದ್ದರು.
ತೀರ್ಥಸ್ನಾನ ಮುಗಿಸಿ ಬಂದ ಭಕ್ತರಿಗೆ ಕೇಟರಿಂಗ್ ಪ್ರಸನ್ನ ಕುಟುಂಬದವರಿಂದ ಉಪಾಹಾರ, ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಭಕ್ತರಿಗೆ ಅನ್ನದಾನ ಸಮಿತಿಯಿಂದ ಅನ್ನಸಂತರ್ಪಣೆ ಮಾಡಲಾಗುತ್ತಿದೆ. ಶುಕ್ರವಾರ ಸುಮಾರು 8 ಸಾವಿರ ಮಂದಿ ಭೋಜನ ಮಾಡಿದರು. ತೆಪ್ಪೋತ್ಸವ ಸಮಿತಿಯಿಂದ ಸಂಜೆ ತುಂಗಾನದಿ ತೀರದಲ್ಲಿ ಖ್ಯಾತ ಓಡಿಸ್ಸಿ ನೃತ್ಯಪಟು ಉದಯಕುಮಾರ್ ಶೆಟ್ಟಿ ತಂಡದ ವತಿಯಿಂದ ನೃತ್ಯ ವೈಭವ ಜರುಗಿತು.
ಮುಜರಾಯಿ ಇಲಾಖೆ ಅಧಿಕಾರಿಗಳಾದ ತಹಸೀಲ್ದಾರ್ ಎಸ್.ರಂಜಿತ್, ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಲಿಗೆ ನಾಗರಾಜ್ ಮತ್ತು ಸದಸ್ಯರು ಇದ್ದರು.
ಮಾನವೀಯತೆ ಮೆರೆದ ಜನತೆ
ಜಾತ್ರೆಯ ಮುನ್ನಾ ದಿನವಾದ ಗುರುವಾರ ನದಿಯಲ್ಲಿ ಮುಳುಗಿ ಮೃತನಾದ ಬಲೂನು ವ್ಯಾಪಾರಿ ವಿಕಾಸ್ ಭೋಂಸ್ಲೆ ಶವವನ್ನು ಅವರ ಕುಟುಂಬ ಸದಸ್ಯರೊಂದಿಗೆ ಆಂಬುಲನ್ಸ್ ಮೂಲಕ ಮಹಾರಾಷ್ಟ್ರದ ಅಮರವಾತಿಗೆ ಕಳುಹಿಸಲಾಯಿತು. ಸಾರ್ವಜನಿಕರು 45 ಸಾವಿರ ರೂ. ಹಣವನ್ನು ಸಂಗ್ರಹಿಸಿ ಕುಟುಂಬಕ್ಕೆ ನೀಡಿ ಸಾಂತ್ವನ ಹೇಳಿದರು. ಪಪಂ ಅಧ್ಯಕ್ಷೆ ಗೀತಾ ರಮೇಶ್, ನಾಗರಾಜ್ ಪೂಜಾರಿ ಮತ್ತು ಇತರರು ಶ್ರಮವಹಿಸಿ ಧನ ಸಹಾಯ ಮಾಡಿದರು.