ಶಿವಮೊಗ್ಗ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜಾತ್ರೆ ಅಂಗವಾಗಿ ಭಕ್ತರು ಕಾವಲಿ ಸೇವೆ ಸಮರ್ಪಿಸಿದರು.
- ಶ್ರದ್ಧಾಭಕ್ತಿಯಿಂದ ಭರಣಿ ಜಾತ್ರೆ ಆಚರಣೆ
- ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ
- ನಾಳೆ ಗುಡ್ಡೇಕಲ್‌ನಲ್ಲಿ ಆಡಿಕೃತ್ತಿಕೆ
ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ (balasubramany) ಸ್ವಾಮಿ ದೇವಸ್ಥಾನದಲ್ಲಿ ಭರಣಿ ಜಾತ್ರೆ ಗುರುವಾರ (thursday) ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಗ್ಗೆಯಿಂದಲೇ ಕಾವಡಿ ಹೊತ್ತ ಭಕ್ತರು ಮೆರವಣಿಗೆಯಲ್ಲಿ ಸಾಗಿ ದೇವರ (god) ದರ್ಶನ ಪಡೆದು ಹರಕೆ ತೀರಿಸಿದರು.
ಬೆಳಗಿನ ಜಾವ 4ರಿಂದಲೇ ನೂರಾರು ಭಕ್ತರು ಕುಟುಂಬ ಸಮೇತರಾಗಿ ನಗರದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ಬೇರೆ ಊರುಗಳಿಂದಲೂ ಪಾದಯಾತ್ರೆ ಆರಂಭಿಸಿ ದೇವಸ್ಥಾನ ತಲುಪಿದರು. ಕೆಲವರು ಕಾವಡಿ ಹೊತ್ತರೆ, ಕೆಲವರು ವೇಲಾಯುಧವನ್ನು ಬಾಯಿಗೆ ಚುಚ್ಚಿಕೊಂಡಿದ್ದರು. ಅರಿಶಿಣ ಮಡಿವಸ್ತ್ರ ಧರಿಸಿ, ಕಬ್ಬಿಣದ ಮುಳ್ಳಿನ ಪಾದುಕೆಗಳನ್ನು ತೊಟ್ಟು ಹರೋಹರ ಘೋಷದೊಂದಿಗೆ ಮಂಗಳವಾದ್ಯಗಳ ನಡುವೆ ದೇವಸ್ಥಾನ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.
ಮಹಿಳೆಯರು, ಮಕ್ಕಳು, ಯುವಜನರು ಹಾಗೂ ಹಿರಿಯರು ವಿವಿಧ ರೀತಿ ಅಲಂಕರಿಸಿದ ಕಾವಡಿಗಳೊಂದಿಗೆ ದೇವರ ಸೇವೆಯಲ್ಲಿ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಈ ಬಾರಿ ಮಳೆ ವಿರಾಮ ನೀಡಿದ್ದರಿಂದ ಗುರುವಾರ ಸಾವಿರಾರು ಭಕ್ತರು ಯಾವುದೇ ತೊಂದರೆ ಇಲ್ಲದೆ ನಡೆದುಕೊಂಡು ಬಂದು ಹರಕೆ ತೀರಿಸಲು ಅನುಕೂಲಕರ ವಾತಾವರಣ ಇತ್ತು.
ಜಾತ್ರೆಗೆ ಆಗಮಿಸಿದ್ದ ಭಕ್ತರಿಗಾಗಿ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಿಸಲಾಯಿತು. ದೇವಸ್ಥಾನ ಸಮಿತಿಯೊಂದಿಗೆ ತಮಿಳು ಸಮುದಾಯದ ವಿವಿಧ ಸಂಘ ಸಂಸ್ಥೆಗಳ 450ಕ್ಕೂ ಹೆಚ್ಚು ಸ್ವಯಂಸೇವಕರು ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅಗತ್ಯ ನೆರವು ನೀಡುವ ಕಾರ್ಯದಲ್ಲಿ ನಿರತರಾಗಿದ್ದರು.
ಜಾತ್ರೆ ಅಂಗವಾಗಿ ಬಾಲಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿದವು. ಶಿವಮೊಗ್ಗ, ಚಿತ್ರದುರ್ಗ, ಅರಸೀಕೆರೆ, ಚಿಕ್ಕಮಗಳೂರು ಸೇರಿ ವಿವಿಧ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು. ಆ.7ರಂದು ಆಡಿಕೃತ್ತಿಕೆ ಜಾತ್ರೆ ನಡೆಯಲಿದ್ದು, ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧೆಡೆ ಭಕ್ತರು ಆಗಮಿಸುವರು.
ಆಡಿಕೃತ್ತಿಕೆ ಜಾತ್ರೆ ಹಿನ್ನೆಲೆಯಲ್ಲಿ ಆ.7ರ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು, ಭದ್ರಾವತಿ ಹಾಗೂ ಎನ್‌ಟಿ ರಸ್ತೆ ಕಡೆಯಿಂದ ಬರುವ ಎಲ್ಲ ಭಾರಿ ವಾಹನಗಳು, ಬಸ್‌ಗಳು, ಸಿಟಿ ಬಸ್‌ಗಳು ಎಂಆರ್‌ಎಸ್ ಮೂಲಕ ಸಂಚರಿಸಬೇಕು. ಶಿವಮೊಗ್ಗದಿಂದ ಬೆಂಗಳೂರು, ಭದ್ರಾವತಿ, ಚಿಕ್ಕಮಗಳೂರು ಹಾಗೂ ಹೊಳೆಹೊನ್ನೂರು ಕಡೆಗೆ ತೆರಳುವ ವಾಹನಗಳು, ಬಸ್‌ಗಳು ಎಂಆರ್‌ಎಸ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ದೇವಸ್ಥಾನ ಮಾರ್ಗದಲ್ಲಿ ಜಿಲ್ಲಾಡಳಿತ ವಾಹನಗಳ ಸಂಚಾರ ನಿಷೇಧಿಸಿದೆ.