ಸೊರಬದಲ್ಲಿ ಆಯೋಜಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿದರು. ಕಡಿದಾಳ್ ಗೋಪಾಲ್, ರಾಮಕೃಷ್ಣ, ಮನುಕುಮಾರ್, ಗಣಪತಿ, ಗೀತಾ ಸತೀಶ್, ಚಂದ್ರೇಗೌಡ ಇತರರಿದ್ದರು.
ಸೊರಬ: ಕಾಂಗ್ರೆಸ್ ಸರ್ಕಾರ ರಚನೆಗೊಂಡು ಎರಡು ವರ್ಷ ಪೂರ್ಣವಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮಂತ್ರಿಗಳು ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.
ಪಟ್ಟಣದಲ್ಲಿ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಭರದಲ್ಲಿ ಇತರೆ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಸರ್ಕಾರ ಮರೆತಿದೆ. ಜನ ವಿರೋಧಿ ಆಡಳಿತಕ್ಕೆ ಮಾಡುತ್ತಿದೆ. ಸೊರಬ ಕ್ಷೇತ್ರದಿಂದ ಗೆದ್ದಿರುವ ಮಧು ಬಂಗಾರಪ್ಪ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ ಎಂದು ದೂರಿದರು.
ಆಡಳಿತ ಪಕ್ಷದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ತಾಲೂಕಿನಲ್ಲಿ ಪಕ್ಷವನ್ನು ಸದೃಢವಾಗಿಸಲು ಮುಖಂಡರ ಜತೆ ಚರ್ಚಿಸಲಾಗಿದೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒತ್ತಾಯಿಸಲಾಗಿದೆ. ಪಕ್ಷದಲ್ಲಿ ತುಂಬ ಹಿರಿಯರು ಇರುವುದರಿಂದ ಅವರ ಸಲಹೆ, ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಜೆಡಿಎಸ್‌ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಪಕ್ಷವು ಬೆಳ್ಳಿ ಹಬ್ಬ ಆಚರಿಸುವ ಸಮಯದಲ್ಲಿ ಪ್ರತಿ ತಾಲೂಕಿನಲ್ಲಿ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ ಜತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಬೆಳೆ ವಿಮೆ ಪರಿಹಾರದಲ್ಲೂ ಅನ್ಯಾಯವಾಗಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು. ಸ್ಥಳೀಯ ಚುನಾವಣೆ ಸೇರಿ ಮುಂದಿನ ವಿಧಾನಸಭೆ ಚುನಾವಣೆವರೆಗೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ರಾಮಕೃಷ್ಣ, ಯುವ ಘಟಕದ ಅಧ್ಯಕ್ಷ ಮನುಕುಮಾರ್, ತಾಲೂಕು ಅಧ್ಯಕ್ಷ ಗಣಪತಿ ಟಿ.ಜಿ.ಕೊಪ್ಪ, ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಕೆ.ಅಜ್ಜಪ್ಪ ಇತರರಿದ್ದರು.