ಕಾರ್ಗಲ್: ಪರಸ್ಪರ ಸಹಕಾರ ತತ್ವದಡಿ 1951ರಲ್ಲಿ ಆರಂಭವಾದ ಕೆಪಿಟಿಸಿಎಲ್ ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ 75 ವರ್ಷಗಳನ್ನು ಪೂರೈಸಿದೆ ಎಂದು ಜೋಗದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಶವಮೂರ್ತಿ ಹೇಳಿದರು.
ಜೋಗ ಶ್ರೀ ಚಾಮುಂಡೇಶ್ವರಿ ಸಭಾಭವನದಲ್ಲಿ ಆಯೋಜಿಸಿದ್ದ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಪಿಟಿಸಿಎಲ್ ಕಾರ್ಮಿಕರು ಸದೃಢರಾಗಲು ಬೆಂಬಲ ನೀಡಿದೆ. ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅನೇಕ ಮಹನೀಯರು ಇಂದು ನಿವೃತ್ತರಾಗಿ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದಾರೆ. ಇಂದಿಗೂ ಸಹಕಾರ ಸಂಘದ ಬಗ್ಗೆ ಅಭಿಮಾನ ಮತ್ತು ನಂಬಿಕೆ ಇರಿಸಿದ್ದಾರೆ ಎಂದು ತಿಳಿಸಿದರು.
ಕೆಪಿಟಿಸಿಎಲ್ ತಾಳಗುಪ್ಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಜ್ರುಲ್ಲಾ ಬೇಗ್ ಮಾತನಾಡಿ, ಸಹಕಾರ ಸಂಘ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದರ ಹಿಂದೆ ಹಲವರ ಶ್ರಮ ಇದೆ. ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸಹಕಾರ ಸಂಘದ ಉಪಾಧ್ಯಕ್ಷ ಉಮೇಶ್, ಕಾರ್ಯನಿರ್ವಾಹಕ ಅಭಿಯಂತ ಚಂದ್ರಶೇಖರ್, ನಿವೃತ್ತ ಲೆಕ್ಕಾಧಿಕಾರಿ ಉಮೇಶ್, ನಿವೃತ್ತ ಅಧ್ಯಕ್ಷರಾದ ರಾಮಚಂದ್ರ, ಮಾದೇಗೌಡ, ಗಣಪತಿ, ಕಾರ್ಯದರ್ಶಿ ಮಹಮದ್ ಶುಕುರ್ ಇತರರಿದ್ದರು.