ಸಾಗರ ಮಾರಿಕಾಂಬಾ ದೇವಸ್ಥಾನದ ಬಳಿ ರಸ್ತೆ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ವೀರೇಶ್‌ಕುಮಾರ್, ಎಚ್.ಕೆ.ನಾಗಪ್ಪ, ಮದನ್, ವಿಠ್ಠಲ್ ಹೆಗಡೆ, ಮಧುಮಾಲತಿ ಇತರರಿದ್ದರು.
ಸಾಗರ: ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಾಗರ ನಗರಕ್ಕೆ 2 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದು, ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ಮಾರಿಕಾಂಬಾ ದೇವಸ್ಥಾನದ ಬಳಿ ಸೋಮವಾರ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರಸಭೆಯ 1.50 ಕೋಟಿ ರೂ. ಅನುದಾನವನ್ನೂ ರಸ್ತೆ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದರು.
ೆ.3ರಂದು ಮಾರಿಕಾಂಬಾ ಜಾತ್ರೆ ಆರಂಭವಾಗಲಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬರೀಕರಣ ಆರಂಭವಾಗಿದೆ. ಸಣ್ಣಮನೆ ಸೇತುವೆ ಬಳಿ ಕಾಮಗಾರಿಯನ್ನು ಶೀಘ್ರ ಮುಗಿಸಲು ಸೂಚಿಸಲಾಗಿದೆ. ಪೊಲೀಸ್ ಸ್ಟೇಷನ್ ವೃತ್ತವನ್ನು ಅಭಿವೃದ್ಧಿ ಮತ್ತು ಠಾಣೆಯನ್ನು ಬೇರೆಡೆಗೆ ವರ್ಗಾಯಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ಮಾರಿಕಾಂಬಾ ದೇವಸ್ಥಾನ ಎದುರಿನ ರಸ್ತೆ ಹಾಗೂ ಉಪ್ಪಾರ ಕೇರಿಯ ಪೋತರಾಜನ ಮನೆಯಿಂದ ನೆಹರು ನಗರದವರೆಗಿನ ರಸ್ತೆಯನ್ನು ಡಾಂಬರೀಕರಣ ಮಾಡಲಾಗುವುದು. ಕಾಮಗಾರಿಗೆ ಹಣಕಾಸಿನ ಕೊರತೆ ಇಲ್ಲ. ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತದೆ. ಜಾತ್ರೆಗಾಗಿ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು, ಭಕ್ತರು ಬರುತ್ತಾರೆ. ಅವರಿಗೆ ನಮ್ಮೂರಿನ ಬಗ್ಗೆ ಗೌರವ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆಯ ಮದನ್, ವಿಠ್ಠಲ್ ಹೆಗಡೆ, ರಾಜೇಶ್, ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ನಾಗೇಂದ್ರ, ಸಮಿತಿಯ ಗಿರಿಧರ ರಾವ್, ನಾಗೇಂದ್ರ ಕುಮುಟಾ, ಐ.ಎನ್.ಸುರೇಶ್ ಬಾಬು, ರವಿ ನಾಯ್ಡು, ದಿನೇಶ್, ತಾರಾ ಮೂರ್ತಿ, ಮಧುಮಾಲತಿ, ಗಣಪತಿ ಮಂಡಗಳಲೆ ಇತರರಿದ್ದರು.