ಸೊರಬ ತಾಲೂಕು ಗುಡ್ಡದ ಬೆಣ್ಣೆಗೇರಿ ಗ್ರಾಮದಲ್ಲಿ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಭೂಮಿಪೂಜೆ ನೆರವೇರಿಸಿದರು. ಸದಾನಂದ ಗೌಡ, ಶಿವಲಿಂಗೇಗೌಡ, ಪ್ರಕಾಶ್, ಹನಮಂತಪ್ಪ, ಸೋಮಣ್ಣ, ಗಣಪತಿ ಇತರರಿದ್ದರು. 
ಶಿವಮೊಗ್ಗ

ಗಡಿ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿ

ಜಿ. ಗಜೇಂದ್ರ
 ಸೊರಬ: ದೂರದ ಗಡಿ ಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಆನವಟ್ಟಿ ಹೋಬಳಿಯ ಸೊರಬ-ಚಿಕ್ಕೆರೂರು ಗಡಿ ಭಾಗ ಗುಡ್ಡದ ಬೆಣ್ಣೆಗೇರಿ ಗ್ರಾಮದಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 
ಸರ್ಕಾರ ಗ್ಯಾರಂಟಿ ಯೋಜನೆ ನೀಡುವ ಮೂಲಕ ಜನಸಾಮಾನ್ಯರ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆ ಮಾಡಿದೆ. ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ಗಡಿ ಭಾಗದ ಗ್ರಾಮಗಳ ರಸ್ತೆ ಸುಧಾರಣೆಗೆ ಕೋಟ್ಯಂತರ ರೂ. ಅನುದಾನ ತರಲಾಗಿದೆ.  ಹಂಚಿ, ಭಾರಂಗಿ, ಗುಡ್ಡದ ಬೆಣ್ಣೆಗೇರಿ ಗ್ರಾಮದ ಮತ್ತು ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.
 ಎರಡು ತಿಂಗಳಲ್ಲಿ ಎಲ್ಲ ಗ್ರಾಪಂಗಳಿಗೂ ಅನುದಾನ ನೀಡುವ ಮೂಲಕ ರಸ್ತೆ ಕಾಮಗಾರಿ, ಕುಡಿವ ನೀರು, ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ತಾಲೂಕಿನ ಹೆಸರೆ, ಕುಪ್ಪಗಡ್ಡೆ ಗ್ರಿಡ್‌ಗಳಿಗೆ ಅನುದಾನ ಬಿಡುಗಡೆಯಾಗಿದ್ದು ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದರಿಂದ ಉಳವಿ ಹೋಬಳಿಯ ಹೆಸರೆ, ಶ್ಯಾಡಲಕೊಪ್ಪ, ಇಂಡೀಹಳ್ಳಿ ಹಾಗೂ ಕುಪ್ಪಗಡ್ಡೆ ಹೋಬಳಿ ಭಾಗದ ರೈತರು ವಿದ್ಯುತ್ ಸಮಸ್ಯೆಯಿಂದ ಮುಕ್ತರಾಗಲಿದ್ದಾರೆ. ಅಧಿಕಾರಿಗಳು ರಸ್ತೆ ಕಾಮಗಾರಿಗಳನ್ನು ಸಾರ್ವಜನಿಕರ, ಗ್ರಾಮಸ್ಥರ ಸಲಹೆ ಮೇರೆಗೆ  ಹಾಗೂ ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ಸಹಕಾರ ಪಡೆದು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದರು. 
ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ, ಶಿವಲಿಂಗೇಗೌಡ, ಪ್ರಕಾಶ್, ಹನಮಂತಪ್ಪ, ಸೋಮಣ್ಣ, ಗಣಪತಿ, ಎಂ.ಡಿ.ಶೇಖರ್ ಪ್ರಭು, ಸತೀಶ್ ಇತರರಿದ್ದರು.