ಶೇ.100 ಫಲಿತಾಂಶ ಪಡೆದ ಕೋಣಂದೂರು ಭಾಗದ ಎನ್‌ಇಎಸ್ ಹೈಸ್ಕೂಲ್ ಹಾಗೂ ಕಾಲೇಜುಗಳ ಬೋಧಕ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜಿ.ಎಸ್.ನಾರಾಯಣ ರಾವ್, ಡಾ. ಪಿ.ನಾರಾಯಣ್, ಎಸ್.ಎನ್.ನಾಗರಾಜ, ಮಹಾಂತೇಶ ಗೌಡ, ಪ್ರಹ್ಲಾದ್, ಎ.ಎನ್.ರಾಮಚಂದ್ರ ಇದ್ದರು.
- ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಸಲಹೆ
- ಬೋಧಕ ಸಿಬ್ಬಂದಿಗೆ ಸನ್ಮಾನ
ಶಿವಮೊಗ್ಗ: ಸಾಧನೆ (acheivement) ಯ ಹಾದಿಯ ಪ್ರತಿಯೊಂದು ಹೆಜ್ಜೆಯೂ ಜಾಗೃತಿಯ ಬೆಳಕಿನಲ್ಲಿ ಸಾಗಬೇಕು. ಗುರಿ (aim) ತಲುಪುವುದಷ್ಟೇ ಪರಿಪೂರ್ಣತೆಯಲ್ಲ. ಆ ಶಿಖರದತ್ತ ಮತ್ತೊಬ್ಬರನ್ನು ಕೈಹಿಡಿದು ನಡೆಸಿ, ಅವರನ್ನೂ ಸಾಧಕರನ್ನಾಗಿ ರೂಪಿಸಿದಾಗ ಸಾರ್ಥಕ್ಯ ಉಂಟಾಗುತ್ತದೆ ಎಂದು ರಾಷ್ಟ್ರೀಯ (national) ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ಎನ್‌ಇಎಸ್‌ನಿಂದ ಮಂಗಳವಾರ ಕೋಣಂದೂರಿನ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ಪಡೆದ ರಾಷ್ಟ್ರೀಯ ಪ್ರೌಢಶಾಲೆ, ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಹುಂಚದ ಪದ್ಮಾಂಬ ಪ್ರೌಢಶಾಲೆಯ ಬೋಧಕ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒತ್ತಡದ ತಂತ್ರಕ್ಕಿಂತ ಆತ್ಮವಿಶ್ವಾಸಕ್ಕೆ ಬದುಕನ್ನು ಮುನ್ನಡೆಸುವ ಶಕ್ತಿಯಿದೆ. ಕಲಿಕೆಗೆ ಅಂತ್ಯವಿಲ್ಲ, ಬದುಕಿನ ಪರೀಕ್ಷೆಗಳಿಗೂ ವಿರಾಮವಿಲ್ಲ. ಆದ್ದರಿಂದ ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸುವ ಮನೋಬಲವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಪರಿಣಾಮಕಾರಿ ಬೋಧನೆಯೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಶಿಕ್ಷಕರ ಶ್ರೇಷ್ಠ ಕರ್ತವ್ಯ. ಬೋಧನಾ ಕೌಶಲವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಎಂದಿಗೂ ಉಳಿಯುವಂತಿರಬೇಕು ಎಂದರು.
ಅನುದಾನಿತ ಶಿಕ್ಷಣ ಸಂಸ್ಥೆಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಎದುರಿಸುತ್ತಿರುವುದು ಕಳವಳಕಾರಿ. ಆದರೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅನುದಾನಿತ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ಆಗದಂತೆ ಆಡಳಿತ ಮಂಡಳಿ ದೂರದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ಮಾನವ ಸಂಪನ್ಮೂಲವನ್ನು ನಿರಂತರ ಒದಗಿಸುವ ಮೂಲಕ ಶಿಕ್ಷಣದ ಶ್ರೇಷ್ಠತೆಯನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎನ್‌ಇಎಸ್‌ನ ವಿದ್ಯಾಸಂಸ್ಥೆಗಳು ಸತತವಾಗಿ ಶೇ.100 ಫಲಿತಾಂಶ ದಾಖಲಿಸುವ ಜತೆಗೆ, ಗುಣಾತ್ಮಕ ಸಾಧನೆಯ ಮೂಲಕ ಮಾದರಿಯಾಗಿ ಹೊರಹೊಮ್ಮಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೂ ಪಟ್ಟಣದಂತೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಸಂಸ್ಥೆಯ ಧ್ಯೇಯಕ್ಕೆ ಈ ಸಾಧನೆಗಳು ಮತ್ತಷ್ಟು ಬಲ ತುಂಬಿವೆ ಎಂದು ಹೇಳಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಮಾಧುರಾವ್, ಎಂ.ಎಸ್.ಅನಂತದತ್ತಾ, ಆಜೀವ ಸದಸ್ಯ ಅನಂತಕೃಷ್ಣ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ರಾಷ್ಟ್ರೀಯ ಪ್ರೌಢಶಾಲೆ ಉಪಪ್ರಾಚಾರ್ಯ ಕೆ.ಬಿ.ಪ್ರಕಾಶ್, ಪಿಯು ಕಾಲೇಜಿನ ಪ್ರಾಚಾರ್ಯ ಮಹಾಂತೇಶ ಗೌಡ, ಹುಂಚ ಪದ್ಮಾಂಬ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಹ್ಲಾದ್ ಇದ್ದರು
"
ಸಂಸ್ಥೆಯ ಶಿಕ್ಷಣ ಪರಂಪರೆಯಲ್ಲಿ ಕೋಣಂದೂರಿನ ಶಾಲಾ ಕಾಲೇಜುಗಳು ವಿಶಿಷ್ಟ ಸ್ಥಾನ ಹೊಂದಿವೆ. ಇಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಕೇವಲ ಬೋಧನೆಗೆ ಸೀಮಿತವಾಗದೆ, ಆತ್ಮೀಯತೆ, ವಿಶ್ವಾಸ ಮತ್ತು ಜವಾಬ್ದಾರಿಯ ಮೌಲ್ಯಗಳ ಮೇಲೆ ನಿರ್ಮಾಣಗೊಂಡಿದೆ.
— ಎಸ್.ಎನ್.ನಾಗರಾಜ ಎನ್‌ಇಎಸ್ ಕಾರ್ಯದರ್ಶಿ