ಸಾಗರದಲ್ಲಿ ಶಾರದಾ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ರ‌್ಯಾಂಕ್ ವಿಜೇತರಿಗೆ ಗೋಪಾಲಕೃಷ್ಣ ಬೇಳೂರು ಪ್ರಮಾಣ ಪತ್ರ ವಿತರಿಸಿದರು. ನಂದಾ ಗೊಜನೂರು, ಡಾ. ಅರುಣಕುಮಾರ್, ಗೀತಾ ಸೋಮೇಶ್ ಇತರರಿದ್ದರು. 
ಶಿವಮೊಗ್ಗ

ಮಕ್ಕಳಲ್ಲಿ ಸಂಗೀತ ಅಭಿರುಚಿ ಬೆಳೆಸಿ | music school Anniversary

ಶಿವಕುಮಾರ ಎಸ್.ಪಿ.
ಸಾಗರ: ಸಂಗೀತ ಕಲಿಕೆ ಮತ್ತು ಆಲಿಸುವುಸು ಮನಸ್ಸಿಗೆ ಆನಂದವನ್ನು ನೀಡುತ್ತದೆ ಮತ್ತು ನಮ್ಮನ್ನು ನಿರಂತರವಾಗಿ ಸಕ್ರಿಯವಾಗಿಸುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಅಜಿತ ಸಭಾಭವನದಲ್ಲಿ ಭಾನುವಾರ ಶಾರದಾ ಸಂಗೀತ ವಿದ್ಯಾಲಯದ 21ನೇ ವಾರ್ಷಿಕೋತ್ಸವ ಉದ್ಘಾಟಿಸಿ, ರ‌್ಯಾಂಕ್ ವಿಜೇತ ಮಕ್ಕಳನ್ನು ಅಭಿನಂದಿಸಿ ಮಾತನಾಡಿದ ಅವರು, ಸಂಗೀತದಲ್ಲಿ ನಿರಂತರ ಕಲಿಕೆ ಬಹಳ ಮುಖ್ಯ ಎಂದರು.
ಸಂಗೀತ, ನೃತ್ಯ ಪ್ರಕಾರಗಳು ನಮ್ಮ ಸಂಸ್ಕೃತಿಯನ್ನು ಪ್ರಸರಿಸುವ ಅದ್ವಿತೀಯ ಕಲೆಗಳು. ಎಂಥದ್ದೇ ಕಲ್ಲು ಮನಸ್ಸನ್ನು ಸಹ ಕರಗಿಸುವ ವಿಶೇಷ ಶಕ್ತಿ ಸಂಗೀತಕ್ಕೆ ಇದೆ. ಪಾಲಕರು ಮಕ್ಕಳನ್ನು ಕೇವಲ ಪುಸ್ತಕದ ಹಿಂದೆ ಓಡಿಸುತ್ತಿದ್ದಾರೆ. ಓದಿನ ಜತೆಗೆ ಮಕ್ಕಳಲ್ಲಿ ಸುಪ್ತವಾಗಿರುವ ಸಂಗೀತ, ನೃತ್ಯ, ಕ್ರೀಡಾ ಕ್ಷೇತ್ರಕ್ಕೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಂಗೀತ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಬೆಂಗಳೂರಿನಿಂದ ಶಿವಮೊಗ್ಗ ತಲುಪವವರೆಗೆ ಕಾರಿನಲ್ಲಿ ಸಂಗೀತವನ್ನು ಕೇಳುತ್ತಿದ್ದರು. ಯಾರು ಕರೆದರೂ ಅವರು ಮಾತನಾಡದಂತೆ ಆಲಿಸುತ್ತಿದ್ದರು. ಸಂಸ್ಥೆಯೊಂದನ್ನು 21 ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬರುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ನೀಡುತ್ತಿರುವ ವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದರು.
ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು, ಡಾ. ಅರುಣಕುಮಾರ್, ಶ್ರೀಪತಿ ಹೆಗಡೆ, ಗಣಪತಿ ಮಂಡಗಳಲೆ, ಸುರೇಶಬಾಬು, ಎಂ.ಮಂಜುಳಾ, ವಿದ್ವಾನ್ ಗುರುದತ್ತ, ವಿದ್ವಾನ್ ಅರುಣಕುಮಾರ್, ವಿದ್ವಾನ್ ಮಧು ಮುರಳಿ, ಗೀತಾ ಸೋಮೇಶ್, ಯಶೋಧರ ಇತರರಿದ್ದರು.