ಸೊರಬದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಒ.ಬಿ.ರಾಜಶೇಖರಪ್ಪ ಉದ್ಘಾಟಿಸಿದರು. ಕೆ.ಟಿ.ಶ್ರೀನಿವಾಸ್, ಬಿ.ಈಶ್ವರ್, ಶ್ರೀಪಾದ ಬಿಚ್ಚುಗತ್ತಿ ಇತರರಿದ್ದರು. 
ಶಿವಮೊಗ್ಗ

ಛಾಯಾಗ್ರಾಹಕರ ಸಂಘವನ್ನು ರಾಜಕೀಯೇತರವಾಗಿ ಬೆಳೆಸಿ

ಸೋಮಶೇಖರ ಎನ್
ಸೊರಬ: ಕಪ್ಪು-ಬಿಳುಪು ಛಾಯಾಚಿತ್ರಗಳ ಮೂಲಕ ಆರಂಭವಾಗಿ ಡಿಜಿಟಲ್ ರೂಪ ಪಡೆದುಕೊಂಡಿರುವ ಫೋಟೊಗ್ರಫಿ ವೃತ್ತಿ ಅನೇಕರಿಗೆ ಬದುಕು ರೂಪಿಸಿಕೊಳ್ಳಲು ನೆರವಾಗಿದೆ ಎಂದು ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ತಾಲೂಕು ಅಧ್ಯಕ್ಷ ಒ.ಬಿ.ರಾಜಶೇಖರಪ್ಪ ಹೇಳಿದರು.
ತಾಲೂಕು ಛಾಯಾಗ್ರಾಹಕರ ಸಂಘದಿಂದ ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಂಘದ ಸದಸ್ಯರು ರಾಜಕೀಯೇತರವಾಗಿ ಸಂಘ ಬೆಳೆಸಬೇಕು. ಛಾಯಾಗ್ರಾಹಕರನ್ನು ಸಮಾಜ ಗೌರವಯುತವಾಗಿ ಕಾಣಬೇಕು. ಛಾಯಾಚಿತ್ರ ಭವನ ನಿರ್ಮಾಣದ ಕುರಿತು ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ 2012ರಿಂದ ಸಂಘವು ಸಕ್ರಿಯವಾಗಿದ್ದು, ಛಾಯಾಚಿತ್ರ ಭವನ ನಿರ್ಮಾಣ ಮಾಡಬೇಕು ಎಂಬುದು ಬಹುದಿನದ ಬೇಡಿಕೆಯಾಗಿದೆ. ಈ ಬಗ್ಗೆ ಮನವಿ ಸಲ್ಲಿಸಿ ನಿವೇಶನ ಸಹ ಗುರುತಿಸಲಾಗಿತ್ತು. ಶೀಘ್ರದಲ್ಲಿ ಸಚಿವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.
ಹಿರಿಯ ಛಾಯಾಗ್ರಾಹಕ ಎಂ.ಕೆ.ಬಸಪ್ಪ, ಪ್ರಕಾಶ್ ಗೌಡ, ದಿವಾಕರ ಅವರನ್ನು ಸನ್ಮಾನಿಸಲಾಯಿತು. ಬಾಬು ಮೈಸೂರು ಅವರಿಂದ ಛಾಯಾಗ್ರಹಣ ಕಾರ್ಯಾಗಾರ ನಡೆಯಿತು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಬಿ.ಈಶ್ವರ್, ದಂತ ವೈದ್ಯ ಅಮೋಘವರ್ಷ, ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ಶ್ರೀನಿವಾಸ್, ತಾಲೂಕು ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಮುಖ್ಯಶಿಕ್ಷಕ ಹಾಲೇಶ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಂ.ತೋಟಪ್ಪ, ಹಸೆ ಚಿತ್ತಾರ ಕಲಾವಿದ ಎಚ್.ವಿಶ್ವನಾಥ, ಪ್ರಸನ್ನ, ಮೋಹನ್ ಇತರರಿದ್ದರು.