ಆನವಟ್ಟಿಯಲ್ಲಿ ಆಯೋಜಿಸಿದ್ದ ನಿವೃತ್ತ ನೌಕರರ ವಾರ್ಷಿಕ ಸಭೆಯಲ್ಲಿ ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಎಸ್.ಎನ್ ಗಂಗಾಧರಪ್ಪ, ಕಲ್ಲಪ್ಪ ಚತ್ರಟ್ಟಿಹಳ್ಳಿ, ಎಚ್.ಜಯಪ್ಪ, ಬಸವಣ್ಯಪ್ಪ, ನಂಜುಂಡಸ್ವಾಮಿ ಇತರರಿದ್ದರು.
ಆನವಟ್ಟಿ: ನಿವೃತ್ತಿ ನಂತರ ಬದುಕು ಸಾಗಿದಂತೆ ಸಮಾಜದಿಂದ ದೂರವಾಗುವ ಸನ್ನಿವೇಶ ಎದುರಾಗುತ್ತದೆ. ಹಾಗಾಗಿ ನಿವೃತ್ತ ಬದುಕನ್ನು ಅರ್ಥಪೂರ್ಣವಾಗಿ ಕಳೆಯಲು ಆರೋಗ್ಯದ ಕಡೆಗೆ ಗಮನಹರಿಸಬೇಕು. ಲವಲವಿಕೆಯಿಂದ ಕಾಲ ಕಳೆಯಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್.ಗಂಗಾಧರಪ್ಪ ತಿಳಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ವಾರ್ಷಿಕ ಸಭೆ ಹಾಗೂ ಪಿಂಚಣಿದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರು ನಿವೃತ್ತಿ ಬಳಿಕ ನಿಧನವಾಗಿ ಪ್ರವೃತ್ತಿಯನ್ನು ಅನುಸರಿಸಬೇಕು. ಕೆಲಸದಲ್ಲಿದ್ದಾಗ ಅಧಿಕಾರ, ಕುರ್ಚಿ, ವಾಹನ ಮುಂತಾದ ವ್ಯವಸ್ಥೆಗೆ ಹೊಂದಿಕೊಂಡಿರುತ್ತೇವೆ. ನಿವೃತ್ತಿ ನಂತರದಲ್ಲಿ ಎಲ್ಲವನ್ನೂ ಬಿಟ್ಟು ಖಾಲಿ ಸಮಯ ಕಳೆಯಲು ಒಮ್ಮೆಲೆ ಕಷ್ಟವಾಗುತ್ತದೆ. ಹಾಗಾಗಿ ಕೃಷಿ ಚಟುವಟಿಕೆಯಲ್ಲಿ ನಿಧನವಾಗಿ ತೊಡಗಿಸಿಕೊಳ್ಳಬೇಕು. ಕಥೆ, ಕಾದಂಬರಿ ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ನಾವು ಕಟ್ಟಿಕೊಂಡಿರುವ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಂಘದ ತಾಲೂಕು ಅಧ್ಯಕ್ಷ ಕಲ್ಲಪ್ಪ ಚತ್ರಟ್ಟಿಹಳ್ಳಿ ಮಾತನಾಡಿ, ನಾವು ಸರ್ಕಾರಿ ನೌಕರಿಯಲ್ಲಿದ್ದಾಗ ಭವನಗಳನ್ನು ಕಟ್ಟಿದ್ದೇವೆ. ನಿವೃತ್ತಿ ನಂತರ ನಮಗೆ ಭವನದಲ್ಲಿ ಒಂದು ಕೊಠಡಿಯನ್ನೂ ಕೊಡುವುದಿಲ್ಲ ಎಂದರೆ ಇದೆಂಥಾ ಅನ್ಯಾಯ. ದಯಮಾಡಿ ಸರ್ಕಾರ ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ನಿವೇಶದ ಜತೆಗೆ ಭವನ ಕಟ್ಟಿಕೊಳ್ಳಲು ಅನುದಾನ ನೀಡಬೇಕು. ಆರೋಗ್ಯ ಸೇವೆ ಕಲ್ಪಿಸುವ ಜತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದರು.
ದೇಹದಾನ, ಕಣ್ಣುದಾನದ ನಿರ್ಧಾರ ಮಾಡಿರುವ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ತಾಪಂ ಮಾಜಿ ಸದಸ್ಯ ಸದಾನಂದ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್, ಸಂಘದ ಉಪಾಧ್ಯಕ್ಷರಾದ ಎಚ್.ಜಯಪ್ಪ, ಬಸವಣ್ಯಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ನಂಜುಂಡಸ್ವಾಮಿ, ಶಿವಮೊಗ್ಗ ಪ್ರಭಾರ ಅಧ್ಯಕ್ಷ ಎಸ್.ಆರ್.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಷಣ್ಮುಖಪ್ಪ, ಶಿಕಾರಿಪುರ ತಾಲೂಕು ಅಧ್ಯಕ್ಷ ಜಿ.ಗಿರಿಯಪ್ಪ, ಸಾಗರ ತಾಲೂಕು ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಇತರರಿದ್ದರು.