ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಸಮರ್ಪಕ ನಿರ್ವಹಣೆಗೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೆ.ವಿ.ವಸಂತ್‌ಕುಮಾರ್, ಎಸ್.ಆರ್.ಗೋಪಾಲ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಇತರರಿದ್ದರು.
- ಅವ್ಯವಸ್ಥೆಗೆ ನಾಗರಿಕ ಹಿತರಕ್ಷಣಾ ವೇದಿಕೆ ಆಕ್ರೋಶ
- ಪಾಲಿಕೆಯಿಂದ ಸಮರ್ಪಕ ನಿರ್ವಹಣೆ ಮಾಡುವಂತೆ ಶಾಸಕರಿಗೆ ಮನವಿ
ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣ (bus stand) ದಲ್ಲಿ ಮೂಲಸೌಕರ್ಯ ಒದಗಿಸುವ ಜತೆ ಪಾಲಿಕೆ (corporation) ಯಿಂದ ಸಮರ್ಪಕ ನಿರ್ವಹಣೆ ನಡೆಸುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಮನವಿ (apeal) ಸಲ್ಲಿಸಿದರು.
ಬಸ್ ನಿಲ್ದಾಣದ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಖಾಸಗಿ ಬಸ್ ನಿಲ್ದಾಣ ಉನ್ನತೀಕರಿಸಲು ಆಸಕ್ತಿ ವಹಿಸಬೇಕು. ಖಾಸಗಿ ಬಸ್ ಮಾಲೀಕರ ಸಂಘದಿಂದ ವರ್ಷಕ್ಕೆ ಪಾಲಿಕೆಗೆ 15 ಲಕ್ಷ ರೂ. ಪಾವತಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಆದರೆ ಐದು ವರ್ಷದಿಂದ ಹಣ ಪಾವತಿಯಾಗದೆ ಪಾಲಿಕೆಗೆ ನಷ್ಟವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ನಿಲ್ದಾಣದ ಮೊದಲ ಮಹಡಿಯಲ್ಲಿ ಶೌಚಗೃಹದ ನಿರ್ವಹಣೆ ಸರಿ ಇಲ್ಲ. ಬಾಗಿಲು ಮುರಿದಿದ್ದು, ನೀರು ಸರಬರಾಜು ವ್ಯವಸ್ಥೆ ಇಲ್ಲ. ಆದರೂ ಸಾರ್ವಜನಿಕರಿಗೆ ನಿಗದಿತ ಪ್ರಮಾಣಕ್ಕಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಹೊಸದಾಗಿ ನಿರ್ಮಿಸಿದ ಶೌಚಗೃಹಗಳಿಗೆ ಬೀಗ ಹಾಕಲಾಗಿದೆ ಎಂದು ದೂರಿದರು.
ನಿಲ್ದಾಣದ ಆವರಣದಲ್ಲಿರುವ ಕುಡಿಯುವ ನೀರಿನ ಘಟಕ ಸರಿಪಡಿಸಬೇಕು. ನೀರಿನ ಗುಣಮಟ್ಟ ಪರಿಶೀಲಿಸಬೇಕು. ದ್ವಿಚಕ್ರವಾಹನ ಪಾರ್ಕಿಂಗ್‌ಗೆ ನಿಯಂತ್ರಣವಿಲ್ಲ. ನಿಲ್ದಾಣದೊಳಗೆ ಅವೈಜ್ಞಾನಿಕವಾಗಿ ದ್ವಿಚಕ್ರ ವಾಹನ ನಿಲುಗಡೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಕ್ಕೆ ಮೀಸಲಿದ್ದ ಜಾಗವನ್ನು ಹೂವಿನ ಮಾರುಕಟ್ಟೆಗೆ ನೀಡಲಾಗಿದೆ. ಹೂವಿನ ಮಾರುಕಟ್ಟೆ ಸ್ಥಳಾಂತರಿಸಿ ಪಾರ್ಕಿಂಗ್‌ಗೆ ಜಾಗ ಒದಗಿಸಬೇಕು ಎಂದು ಆಗ್ರಹಿಸಿದರು.
ಮಳೆಗಾಲದಲ್ಲಿ ನಿಲ್ದಾಣದೊಳಗೆ ನೀರು ನಿಲ್ಲುವುದನ್ನು ತಪ್ಪಿಸಲು ಒಳಚರಂಡಿ ವ್ಯವಸ್ಥೆ ಸುಧಾರಿಸಬೇಕು. ಅನಧಿಕೃತ ಬೀದಿಬದಿ ಆಹಾರ ಗಾಡಿಗಳು ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿಲ್ಲುತ್ತಿವೆ. ಸ್ವಚ್ಛತೆ ನಿರ್ವಹಣೆ ಆಗುತ್ತಿಲ್ಲ. ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದ ಟಿವಿ ಕಣ್ಮರೆಯಾಗಿದೆ. ಸರಿಯಾದ ಭದ್ರತೆ ಇಲ್ಲ. ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ.ಅಶೋಕ್ ಕುಮಾರ್ ಇತರರಿದ್ದರು.
ಅವೈಜ್ಞಾನಿಕ ಫುಟ್‌ಪಾತ್
ಸ್ಮಾರ್ಟ್ ಸಿಟಿ ಕಾಮಗಾರಿ ನಿರ್ವಹಣೆಯನ್ನು ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ನಗರದ ವಿವಿಧೆಡೆ ಪಾದಚಾರಿ ಮಾರ್ಗಗಳು ಕುಸಿದಿವೆ. ಸ್ಟೀಲ್ ರೈಲಿಂಗ್ಸ್‌ಗಳು ತುಂಡಾಗಿವೆ. ಲಕ್ಷ್ಮೀ ಟಾಕೀಸ್‌ನಿಂದ ಉಷಾ ನರ್ಸಿಂಗ್ ಹೋಂವರೆಗೆ ಅವೈಜ್ಞಾನಿಕವಾಗಿ ಫುಟ್‌ಪಾತ್ ನಿರ್ಮಿಸಲಾಗಿದೆ. ನಂಜಪ್ಪ ಆಸ್ಪತ್ರೆಯಿಂದ ಜಿಪಂ ಮುಂಭಾಗದವರೆಗೆ ಸರಿಯಾಗಿ ಫುಟ್‌ಪಾತ್ ನಿರ್ಮಿಸದೆ ಲಕ್ಷಾಂತರ ರೂ. ವ್ಯಯ ಮಾಡಲಾಗಿದೆ. ಎರಡು ಅವೈಜ್ಞಾನಿಕ ಕಾಮಗಾರಿಗಳ ಬದಲಿಗೆ ಹೊಸದಾಗಿ ಸಮರ್ಪಕ ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು.