ಭದ್ರಾವತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಕೆ.ಎಚ್.ತೀರ್ಥಯ್ಯ, ಸರಸ್ವತಿ ಇತರರಿದ್ದರು.
- ಅಕ್ರಮ, ಅನೈತಿಕ ಚಟುವಟಿಕೆ ತಡೆಗಾಗಿ ಬಿಜೆಪಿ ಆಕ್ರೋಶ
- ಪೊಲೀಸರಿಂದಲೇ ರಾಜಿ, ಸಂಧಾನ
- ಡಿವೈಎಸ್ಪಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ
ಭದ್ರಾವತಿ: ನಗರದಲ್ಲಿ ಇಸ್ಪೀಟು, ಒ.ಸಿ, ಜೂಜಾಟ, ಗಾಂಜಾ, ಹಲ್ಲೆ, ಕೊಲೆ ಸೇರಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕೆಲ ಪೊಲೀಸ್ ಅಧಿಕಾರಿಗಳು ಇವುಗಳನ್ನು ನಿಯಂತ್ರಿಸುವ ಬದಲಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೊಲೀಸ್ ಉಮೇಶ್ ಹಾಗೂ ಅವರ ಸಂಬಂಧಿ ಸುಹಾಸ್ ಮೇಲೆ ಹಲ್ಲೆ, ಗಾಂಧಿ ವೃತ್ತದಲ್ಲಿ ಗಾಂಧಿ ಎಂಬಾತನ ಮೇಲೆ ನಡೆದ ಹಲ್ಲೆ, ಸಿದ್ದಾರೂಢ ನಗರದ ಜಿಮ್ನೊಳಗೆ ಕೊಲೆ ಯತ್ನ ಇತ್ಯಾದಿ ಪ್ರಕರಣಗಳು ನಡೆಯಲು ಕೆಲವು ಪೊಲೀಸ್ ಅಧಿಕಾರಿಗಳ ನಡೆಯೇ ಕಾರಣ ಎಂದು ದೂರಿದರು.
ಸ್ಥಳಿಯ ಕೆಲ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಮನೆಗೆ ತೆರಳಿ ರಾಜಿ ಸಂಧಾನ ಮಾಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕೇ ಹೊರತು ರಾಜಿ ಸಂಧಾನಕ್ಕಲ್ಲ. ಸಂಧಾನವನ್ನು ನಾವೇ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಗ್ರಾಮಾಂತರ ಅಧ್ಯಕ್ಷ ಕೆ.ಎಚ್.ತೀರ್ಥಯ್ಯ, ಪ್ರಮುಖರಾದ ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಕೂಡ್ಲಿಗೆರೆ ಹಾಲೇಶ್, ಸರಸ್ವತಿ, ಸಿಮೆಂಟ್ ಮಂಜಣ್ಣ, ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ಸುರೇಶಪ್ಪ, ರಾಮಲಿಂಗಯ್ಯ, ರಾಜಶೇಖರ್, ಧನುಷ್, ಹಾ.ರಾಮಪ್ಪ, ಕವಿತಾ ಇತರರಿದ್ದರು.
ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಹಿಡಿಯುವ ಕೆಲಸ ನಮ್ಮ ಇಲಾಖೆಯಿಂದ ಮಾಡುತ್ತೇವೆ. ಗಾಂಜಾ ಮಾರಾಟ ಮಾಡುವವರನ್ನು ಈಗಾಗಲೆ ಪತ್ತೆಪಚ್ಚುವ ಕೆಲಸ ನಡೆಯುತ್ತಿದೆ. ಇಸ್ಪೀಟ್, ಜೂಜಾಟಗಳ ಮೇಲೆ ನಿಗಾ ಇರಿಸಲಾಗುವುದು.
> ಕಾರಿಯಪ್ಪ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ
ಟಯರ್ಗೆ ಬೆಂಕಿ ಹಚ್ಚಲು ಯತ್ನ
ನಗರದ ಬೈಪಾಸ್ ರಸ್ತೆ ಬಳಿ ಇರುವ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನಾಕಾರರು ಟಯರ್ಗೆ ಬೆಂಕಿ ಹಚ್ಚಲು ಮುಂದಾದರು. ಆದರೆ ಪೊಲೀಸ್ ಸಿಬ್ಬಂದಿ ಟಯರ್ ವಶಕ್ಕೆ ಪಡೆದರು. ಅಂಡರ್ ಬ್ರಿಡ್ಜ್ ವೃತ್ತದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ಟಯರ್ಗೆ ಬೆಂಕಿಹಚ್ಚಲು ಪೊಲೀಸರು ಅವಕಾಶ ನೀಡಿದ್ದಾರೆ. ಈಗ ಬಿಜೆಪಿ ಕಾರ್ಯಕರ್ತರು ಹಚ್ಚಿದರೆ ಅದನ್ನು ಏಕೆ ವಿರೋಧಿಸುವುದು. ಕಾನೂನು ಎಲ್ಲರಿಗೂ ಒಂದೇ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.