ಹುಂಚದಕಟ್ಟೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಜಾಗ ಖುಲ್ಲಾಗೊಳಿಸದಂತೆ ಒತ್ತಾಯಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಚೇತನ್, ಉಮೇಶ್, ಬಂಡಿ ರಾಮಚಂದ್ರ, ಜಿ.ಎಸ್.ನಾರಾಯಣ ರಾವ್, ಡಿ.ಎಸ್.ವಿಶ್ವನಾಥ ಶೆಟ್ಟಿ ಇತರರಿದ್ದರು. 
ಶಿವಮೊಗ್ಗ

ಜಾಗ ಒತ್ತುವರಿ ತೆರವುಗೊಳಿಸದಂತೆ ಒತ್ತಾಯ | Protest

ತೀರ್ಥಹಳ್ಳಿ: ರಾಜ್ಯದಲ್ಲಿ ಮಳೆಹಾನಿಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಂತೆ ಬಿಡಿಗಾಸನ್ನೂ ನೀಡದೆ ರಾಜ್ಯ ಸರ್ಕಾರವನ್ನು ದೂಷಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಹುಂಚದಕಟ್ಟೆ ಗ್ರಾಮ ಪಂಚಾಯಿತಿ ಕಚೇರಿ ಎದುರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದುರಾಡಳಿತದ ಬಗ್ಗೆ ಪ್ರಬುದ್ಧ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಹುಂಚದಕಟ್ಟೆಯ ಹಿರಿಯ ನಾಗರಿಕ ಗುಲಾಬಿ ರಾಮಣ್ಣ ಶೆಟ್ಟಿ ಕುಟುಂಬದ ಸ್ವಾಧೀನಾನುಭವದಲ್ಲಿ ಇರುವ ಜಾಗವನ್ನು ಖುಲ್ಲಾಗೊಳಿಸಲು ಮುಂದಾಗಿರುವುದು ಖಂಡನೀಯ. ಇದು ಬಿಜೆಪಿ ದುರಾಡಳಿತಕ್ಕೆ ಸಾಕ್ಷಿ. ಬಿಜೆಪಿ ಆಡಳಿತದಲ್ಲಿ ಅನ್ಯಪಕ್ಷದವರಿಗೆ ನೀಡುತ್ತಿರುವ ದೌರ್ಜನ್ಯವನ್ನು ಸಾರ್ವಜನಿಕರು ಮನಗಾಣಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿ ಬಿಜೆಪಿ ಪಕ್ಷದ ಮುಖಂಡರೇ ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರೇ ಇವರಿಗೆ ಬೆಂಗಾವಲಾಗಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಗುಲಾಬಿ ರಾಮಣ್ಣ ಶೆಟ್ಟಿ ಬಡ ಕುಟುಂಬದ ಸ್ವಾಧೀನಾನುಭವದ ಜಾಗ ಖುಲ್ಲಾಪಡಿಸಲು ತಹಸೀಲ್ದಾರರಿಗೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.
ಗ್ರಾಪಂನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ನರೇಗಾ ಯೋಜನೆಯಡಿ ನೀರಿಲ್ಲದ ಕೆರೆಗೆ ಬಿಲ್ ಮಾಡಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. 8 ಲಕ್ಷ ರೂ. ಮೊತ್ತದ ಚರಂಡಿ ಕಾಮಗಾರಿಯಲ್ಲಿ ಕಮೀಷನ್ ಪಡೆಯಲಾಗಿದೆ. ಬಿಜೆಪಿ ಮುಖಂಡನ ಮನೆ ಕೆಲಸದವರಿಗೆ ಮನೆ ನಿರ್ಮಾಣಕ್ಕೆ ಹೈಸ್ಕೂಲ್ ಜಾಗದಲ್ಲಿ ಬೆಳೆದಿದ್ದ ಮರವನ್ನು ಬಳಸಲಾಗಿದೆ. ಈ ಎಲ್ಲ ಅಕ್ರಮಗಳ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ಎಂ.ಶೈಲಾ, ಸದರಿ ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ತೀರ್ಪು ಬರುವವರೆಗೆ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. ಈ ಬಗ್ಗೆ ತಹಸೀಲ್ದಾರ್ ಗಮನಕ್ಕೂ ತರುತ್ತೇನೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಚೇತನ್ ಹೊಸಕೊಪ್ಪ, ನಿಟ್ಟೂರು ಉಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಸತೀಶ್, ಆದರ್ಶ, ಹುಲ್ಲತ್ತಿ ದಿನೇಶ್ ಇತರರಿದ್ದರು.