ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಎಚ್.ಎಸ್.ನಿರಂಜನ, ರಂಜಿತಾ, ಗೋಪಿ ರಂಗಸ್ವಾಮಿ, ನಂದನ್, ನಿಖಿಲ್, ರವಿ ಇಂದೋಜಿ, ಅಂಜನ್, ವಿನಯ್ ಹಿರೇಮಳಲಿ, ಶ್ವೇತಾ ಇದ್ದರು. 
ಶಿವಮೊಗ್ಗ

ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ I students educational problums

ಅರವಿಂದ ಅಕ್ಲಾಪುರ

ಪ್ರಮುಖ ಮುಖ್ಯಾಂಶಗಳು

  • ಎಬಿವಿಪಿ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರತಿಭಟನೆ
  • ಕುವೆಂಪು ವಿವಿ ಅವ್ಯವಸ್ಥೆಗೆ ಆಕ್ಷೇಪ
ಶಿವಮೊಗ್ಗ :

ವಿದ್ಯಾರ್ಥಿಗಳ (students) ವಿವಿಧ ಶೈಕ್ಷಣಿಕ (educational) ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರವೇಶಾತಿ ಮುಂದುವರಿಸುವಂತೆ ಒತ್ತಾಯಿಸಿ ಎಬಿವಿಪಿ (abvp) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಮಹಾವೀರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಬಳಿಕ ಕುವೆಂಪು ವಿವಿ ಕುಲಸಚಿವ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಬಸ್ ಸೌಕರ್ಯದ ಕೊರತೆ, ಹಾಸ್ಟೆಲ್‌ಗಳಲ್ಲಿ ಸ್ಥಳಾವಕಾಶವಿಲ್ಲದೇ ಇರುವುದು, ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ, ರಾಜ್ಯದಲ್ಲಿ ನಡೆದಿರುವ ಕೆಪಿಎಸ್‌ಸಿ ನೇಮಕಾತಿಯಲ್ಲಿನ ಹಗರಣಗಳ ಕುರಿತು ಪ್ರತಿಭಟನಾಕಾರರು ಪ್ರಸ್ತಾಪಿಸಿದರು.
ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಕಾಲದಲ್ಲಿ ಬಸ್ ಸಿಗದೆ ಪರದಾಡುತ್ತಿದ್ದಾರೆ. ಕೂಡಲೇ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚುವರಿ ಸರ್ಕಾರಿ ಬಸ್‌ಗಳನ್ನು ಒದಗಿಸಬೇಕು. ನಗರದ ಹೊರವಲಯದ ಮಲ್ಲಿಗೇನಹಳ್ಳಿಯಲ್ಲಿರುವ ದೇವರಾಜ ಅರಸು ವಿದ್ಯಾರ್ಥಿ ನಿಲಯ ಸೇರಿದಂತೆ ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಿಂದ ಕಾಲೇಜುಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್‌ಸಿ ಹಗರಣ ಈಗಾಗಲೇ ಮುನ್ನಲೆಗೆ ಬಂದಿದ್ದು ಅಲ್ಲಿನ ಅವ್ಯವಹಾರಗಳಿಂದ ಅಭ್ಯರ್ಥಿಗಳ ಭವಿಷ್ಯ ಕತ್ತಲಿನಲ್ಲಿದೆ. ಕೂಡಲೇ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣಶಿಕ್ಷೆ ವಿಧಿಸಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರವೇಶಾತಿಯನ್ನು ಮತ್ತೆ ಆರಂಭಿಸಬೇಕು. ಕುವೆಂಪು ವಿವಿ ಪರೀಕ್ಷಾಂಗ ವಿಭಾಗದಿಂದ ಅಸಮರ್ಪಕ ಡಿಜಿಟಲ್ ಮೌಲ್ಯಮಾಪನವನ್ನು ರದ್ದುಪಡಿಸಬೇಕು. ವಿವಿಯ ಘಟಿಕೋತ್ಸವವನ್ನು ತಕ್ಷಣವೇ ನಡೆಸಬೇಕು. ಕ್ರೀಡಾಶುಲ್ಕದ ದುರ್ಬಳಕೆ ತಡೆಯಬೇಕು ಎಂದು ಆಗ್ರಹಿಸಿದರು.
ಎಬಿವಿಪಿಯ ಮಹಾನಗರ ಕಾರ್ಯದರ್ಶಿ ಎಚ್.ಎಸ್.ನಿರಂಜನ, ರಾಜ್ಯ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ವಿಭಾಗ ಸಂಚಾಲಕ ರವಿ ಇಂದೋಜಿ, ಜಿಲ್ಲಾ ಸಂಚಾಲಕ ನಂದನ್, ಮಹಾನಗರ ಸಹ ಕಾರ್ಯದರ್ಶಿ ವಿನಯ್ ಹಿರೇಮಳಲಿ, ನಗರ ಕಾರ್ಯಕಾರಣಿ ಸದಸ್ಯ ನಿಖಿಲ್, ವಿಭಾಗ ಕಾರ್ಯಾಲಯ ಕಾರ್ಯದರ್ಶಿ ಅಂಜನ್, ಪ್ರಮುಖರಾದ ರಂಜಿತಾ, ನಂದಿನಿ, ಶ್ವೇತಾ ಮುಂತಾದವರು ಪ್ರತಿಭಟನೆಯಲ್ಲಿದ್ದರು.