ಬೆಂಗಳೂರಿನ ಲೋಕಾಯುಕ್ತ ಕಚೇರಿ
- ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲು
- ಬಿ ರಿಪೋರ್ಟ್ ನೀಡಲು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಕರೆ
- ಖುದ್ದಾಗಿ ಕಚೇರಿಗೆ ಬಂದು ಭೇಟಿಯಾಗುವುದಾಗಿ ಹೇಳುತ್ತಿದ್ದಂತೆ ವಂಚಕನ ಕರೆ ಸ್ಥಗಿತ
ಶಿವಮೊಗ್ಗ: ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು,‘ ಬಿ’ ರಿಪೋರ್ಟ್ ನೀಡಲು ಶಿವಮೊಗ್ಗದ ಲೋಕೋಪಯೋಗಿ ಇಲಾಖೆ(PWD Dept) ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.
59 ವರ್ಷದ ಇಂಜಿನಿಯರ್‌ಗೆ ವಾಟ್ಸ್‌ಆ್ಯಪ್(WhatsApp) ಮೂಲಕ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಬೆಂಗಳೂರು ಮುಖ್ಯ ಕಚೇರಿಯ ಲೋಕಾಯುಕ್ತ ಅಧಿಕಾರಿ ದಯಾನಂದ್ ಎಂದು ಪರಿಚಯಿಸಿಕೊಂಡಿದ್ದ. ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ನೀಡಲು ಆನ್‌ಲೈನ್ ಮೂಲಕ ಹಣ ನೀಡಲು ಸಿದ್ಧರಿರುವಂತೆ ಸೂಚಿಸಿದ್ದ. ಆದರೆ ಇಂಜಿನಿಯರ್ ತಾವು ಫೋನ್ ಪೇ ಮತ್ತು ಗೂಗಲ್ ಪೇ ಬಳಸುತ್ತಿಲ್ಲ. ಖುದ್ದಾಗಿ ಕಚೇರಿಗೆ ಬಂದು ಭೇಟಿಯಾಗುವುದಾಗಿ ಹೇಳುತ್ತಿದ್ದಂತೆ ವಂಚಕ ಕರೆ ಸ್ಥಗಿತಗೊಳಿಸಿದ್ದಾನೆ.
ಬಳಿಕ ಅನುಮಾನಗೊಂಡ ಇಂಜಿನಿಯರ್ ಶಿವಮೊಗ್ಗ ಲೋಕಾಯುಕ್ತ(Lokayukta) ಕಚೇರಿಗೆ ತೆರಳಿ ಪರಿಶೀಲಿಸಿದಾಗ ತಮ್ಮ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂಬುದು ಖಚಿತಪಡಿಸಿಕೊಂಡಿದ್ದಾರೆ. ಆದರೂ ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.