ಬಂಧಿತ ಆರೋಪಿ ಟಿ.ಧನಂಜಯ ರೆಡ್ಡಿ. 
ಶಿವಮೊಗ್ಗ

ಎಇಇಗೆ ಹಣಕ್ಕೆ ಬೇಡಿಕೆ; ಆಂಧ್ರಪ್ರದೇಶದ ಆರೋಪಿ ಬಂಧನ | Cyber ​​police station

ಪ್ರಮುಖ ಮುಖ್ಯಾಂಶಗಳು

  • ಲೋಕಾಯುಕ್ತ ಪ್ರಧಾನ ಕಚೇರಿ ಹಿರಿಯ ಅಧಿಕಾರಿ ಹೆಸರಲ್ಲಿ ವಾಟ್ಸ್‌ಆ್ಯಪ್ ಕರೆ
  • ಆಂಧ್ರಪ್ರದೇಶ ಮೂಲದ ಆರೋಪಿ ಬಂಧಿಸಿದ ಸೈಬರ್ ಠಾಣೆ ಪೊಲೀಸರು
  • ಆಂಧ್ರದ ಕದಿರಿ ನಿವಾಸಿ ಟಿ.ಧನಂಜಯ ರೆಡ್ಡಿ ಬಂಧಿತ ಆರೋಪಿ
ಶಿವಮೊಗ್ಗ: ಬೆಂಗಳೂರಿನ ಲೋಕಾಯುಕ್ತ ಪ್ರಧಾನ ಕಚೇರಿ ಹಿರಿಯ ಅಧಿಕಾರಿ ಹೆಸರಲ್ಲಿ ಶಿವಮೊಗ್ಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ(ಎಇಇ)ರಿಗೆ ವಾಟ್ಸ್‌ಆ್ಯಪ್ ಕರೆ(WhatsApp call) ಮಾಡಿ ಹಣಕ್ಕೆ ಬೇಡಿಕೆಯಿಟ್ಟು ವಂಚಿಸಲು ಯತ್ನಿಸಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಶಿವಮೊಗ್ಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ನಿವಾಸಿ ಟಿ.ಧನಂಜಯ ರೆಡ್ಡಿ (33) ಬಂಧಿತ ಆರೋಪಿ. ಈತ ಶಿವಮೊಗ್ಗ ಲೋಕೋಪಯೋಗಿ ಇಲಾಖೆ(Public Works Department)ಯ ವಿದ್ಯುತ್ ಉಪ ವಿಭಾಗದಲ್ಲಿ ಎಇಇ, ಚಿತ್ರದುರ್ಗದ ಪ್ರಶಾಂತನಗರದ ತಿಪ್ಪೇಸ್ವಾಮಿ (59) ಅವರಿಗೆ ಸೋಮವಾರ ವಾಟ್ಸ್‌ಆ್ಯಪ್ ಕರೆ ಮಾಡಿದ್ದ.
ಬೆಂಗಳೂರಿನ ಲೋಕಾಯುಕ್ತ ಪ್ರಧಾನ ಕಚೇರಿಯ ಅಧಿಕಾರಿ ದಯಾನಂದ ಎಂದು ಪರಿಚಯಿಸಿಕೊಂಡು ನಿಮ್ಮ ವಿರುದ್ಧ ಲೋಕಾಯುಕ್ತ ಠಾಣೆ(Lokayukta Station)ಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಕೇಸಿನಲ್ಲಿ ಕೋರ್ಟ್‌ಗೆ ಬಿ-ರಿಪೋರ್ಟ್ ಸಲ್ಲಿಸಬೇಕಾದರೆ ಆನ್‌ಲೈನ್ ಮೂಲಕ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಈ ಕುರಿತು ತಿಪ್ಪೇಸ್ವಾಮಿ ಅವರು ನೀಡಿದ ದೂರಿನನ್ವಯ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆ(Cyber ​​Crime Police Station)ಯಲ್ಲಿ ಪ್ರಕರಣ ದಾಖಲಾಗಿತ್ತು.
ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ(Cyber ​​Crime Police Inspector) ಮಂಜುನಾಥ್ ನೇತೃತ್ವದಲ್ಲಿ ಎಎಸ್‌ಐ ಜೆ.ಕೆ.ಪ್ರಕಾಶ್, ಸಿಬ್ಬಂದಿ ಕಿರಣ್‌ಕುಮಾರ್, ಸಂಗಮೇಶ ಹಾಗೂ ಶರತ್‌ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಧನಂಜಯ ರೆಡ್ಡಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿದೆ. ಆರೋಪಿಯನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.