ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿದ ಹೈನುಗಾರರು ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರಕುಚ್ಚಿ ಲೋಕೇಶ್, ವಿದ್ಯಾಧರ್, ಗಜೇಂದ್ರ ಭದ್ರಾವತಿ, ಅರುಣಾದೇವಿ, ವಿದ್ಯಾಧರ್, ಕೆ.ಎಲ್.ಜಗದೀಶ್ವರ್, ಆನಂದ್ ಮುಂತಾದವರಿದ್ದರು. 
ಶಿವಮೊಗ್ಗ

ಹಾಲು ಖರೀದಿ ದರ ಹೆಚ್ಚಳಕ್ಕೆ ಆಗ್ರಹ I milk price hike

ಪ್ರಮುಖ ಮುಖ್ಯಾಂಶಗಳು

  • ಹೈನುಗಾರರಿಂದ ಪ್ರತಿಭಟನೆ
  • ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ
  • ಸುರಿಯುತ್ತಿದ್ದ ಮಳೆಯ ನಡುವೆಯೇ ಮೆರವಣಿಗೆ
ಶಿವಮೊಗ್ಗ: ಹಾಲು (milk) ಒಕ್ಕೂಟದಿಂದ ಹಾಲು ಖರೀದಿ ದರ (price) ಹೆಚ್ಚಿಸಬೇಕು. ಹೈನು ಉತ್ಪಾದಕರಿಗೆ ನೀಡಬೇಕಿರುವ ಪ್ರೋತ್ಸಾಹ ಧನದ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಹೈನುಗಾರರು ಮಂಗಳವಾರ ನಗರದಲ್ಲಿ ಪ್ರತಿಭಟನೆ (protest) ನಡೆಸಿದರು.
ಸತತವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೇ ಎಎ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಹೈನು ಉತ್ಪಾದಕರು ಡಿಸಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದರು. ಐದು ತಿಂಗಳಿನಿಂದ ಸರ್ಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈನು ಉತ್ಪಾದನೆಗೆ ಮಾಡುತ್ತಿರುವ ಖರ್ಚನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಲು ಉತ್ಪಾದಕರ ಕಲ್ಯಾಣದ ದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ 20 ರೂ. ಹೆಚ್ಚುವರಿ ಸಹಾಯಧನ ನೀಡಬೇಕು. ಲೀಟರ್ ಹಾಲಿನ ಪ್ರೋತ್ಸಾಹ ಧನವನ್ನು 5 ರೂ.ನಿಂದ 10 ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಹಾಲು ಉತ್ಪಾದನೆಗೆ ಹೆಚ್ಚು ಖರ್ಚಾಗುತ್ತಿದೆ. ಖರ್ಚಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹಿಂಡಿಯ ಬೆಲೆ ದುಪ್ಪಟ್ಟಾಗಿದೆ. ಕೊಟ್ಟಿಗೆ ನಿರ್ಮಾಣ, ನೀರೊದಗಿಸುವುದು, ವಿದ್ಯುತ್, ಹಾಲು ಕರೆಯುವ ಯಂತ್ರ, ಕೂಲಿಕಾರರ ವೇತನ ಇವೆಲ್ಲವೂ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಶಿಮುಲ್ ಮಾಜಿ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಮಾತನಾಡಿ, ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಎರಡು ಖಾಸಗಿ ಹಾಲು ಮಾರಾಟ ಕಂಪನಿಗಳು ಶಿವಮೊಗ್ಗ ತಾಲೂಕಿನಲ್ಲಿ ರೈತರಿಗೆ ವಿವಿಧ ಆಮಿಷವೊಡ್ಡಿ ಹಾಲು ಖರೀದಿಸುತ್ತಿವೆ. ಶಿಮುಲ್ ಸದಸ್ಯರಾಗಿರುವ ರೈತರು ಖಾಸಗಿ ಕಂಪನಿಗಳಿಗೆ ಹಾಲು ನೀಡಿದರೆ ಅವರಿಗೆ ಶಿಮುಲ್‌ನಿಂದ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂದು ಎಚ್ಚರಿಸಿದರು.
ಖಾಸಗಿಯವರು ಹಾಲಿನ ದರವನ್ನು ಈಗಾಗಲೇ ಹೆಚ್ಚಿಸಿದ್ದಾರೆ. ಆದರೆ ಕೆಎಂಎಫ್ ದರ ಹೆಚ್ಚಿಸಿಲ್ಲ. ಉತ್ಪಾದನೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ಅನೇಕರು ಹಸುವನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಗರದ ಜನರಿಗೆ ಅರ್ಥವಾಗಬೇಕು. ಮದ್ಯ, ಕುಡಿಯುವ ನೀರಿಗೂ ಜನ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಗುಣಮಟ್ಟದ ಹಾಲಿಗೆ ಬೆಲೆ ಹೆಚ್ಚಳವಾದಾಗ ಕೋಲಾಹಲ ಉಂಟಾಗುತ್ತದೆ. ಹಾಲು ಉತ್ಪಾದಕರ ಸಮಸ್ಯೆಗಳ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದರು.
ವೇದಿಕೆ ಅಧ್ಯಕ್ಷ ಕರಕುಚ್ಚಿ ಲೋಕೇಶ್, ಶಿಮೂಲ್ ಅಧ್ಯಕ್ಷ ವಿದ್ಯಾಧರ್, ಮಾಜಿ ಅಧ್ಯಕ್ಷ ಆನಂದ್, ವೇದಿಕೆಯ ಸಂಘಟನಾ ಕಾರ್ಯದರ್ಶಿ ಮೂರ್ತಿ, ಗಜೇಂದ್ರ ಭದ್ರಾವತಿ, ಎಸ್.ಮೂರ್ತಿ, ಮಂಜುನಾಥ್, ಕಿರಣ್, ಅಯೂಬ್, ಪ್ರಭು, ದಿನೇಶ್, ನಾಗರಾಜ್, ಅರುಣಾದೇವಿ, ಮಂಜುನಾಥ್, ರುದ್ರೇಶ್ ಚಟ್ನಳ್ಳಿ, ಜಯರಾಂ ಗೋಂಧಿ, ಸೀಮಾಬಾಯಿ ಮುಂತಾದವರು ಪ್ರತಿಭಟನೆಯಲ್ಲಿ ಭಗವಹಿಸಿದ್ದರು.