ಇಎಸ್‌ಐ ವೇತನ ಮಿತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಬಿಎಂಎಸ್ ಸಂಘಟನೆ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಚ್.ಎಲ್.ವಿಶ್ವನಾಥ್, ರುದ್ರೇಶ್, ಶಂಕರ್ ಇತರರಿದ್ದರು. 
ಶಿವಮೊಗ್ಗ

ಇಎಸ್‌ಐ ವೇತನ ಮಿತಿ ಹೆಚ್ಚಳಕ್ಕೆ ಒತ್ತಾಯ I esi salary protest

ಪ್ರಮುಖ ಮುಖ್ಯಾಂಶಗಳು

  • 42 ಸಾವಿರ ರೂ.ಗೆ ಏರಿಸಲು ಆಗ್ರಹ
  • ಬಿಎಂಎಸ್ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ
ಶಿವಮೊಗ್ಗ: ಇಎಸ್‌ಐ (esi) ಸೌಲಭ್ಯ ಪಡೆಯಲು ಇರುವ ವೇತನ (salary) ಮಿತಿಯನ್ನು 21 ಸಾವಿರ ರೂ.ನಿಂದ 42 ಸಾವಿರ ರೂ.ಗೆ ಹೆಚ್ಚಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ಪಾಲಿಕೆ ಆವರಣದಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿ ಪ್ರತಿಭಟನೆ (protest) ನಡೆಸಿದರು.
ಕೇಂದ್ರ ಸರ್ಕಾರದ ನಿರ್ಣಯದಂತೆ ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಇಪಿಎಫ್-95 ಪಿಂಚಣಿ ಸೌಲಭ್ಯವನ್ನು ಒಂದು ಸಾವಿರ ರೂ.ನಿಂದ 7,500 ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಇಪಿಎಫ್ ವಂತಿಗೆ ಮಿತಿಯನ್ನು 15 ಸಾವಿರ ರೂ.ನಿಂದ 30 ಸಾವಿರ ರೂ.ಗೆ ಹೆಚ್ಚಿಸಬೇಕು. ಬೋನಸ್ ಮಿತಿಯನ್ನು 7 ಸಾವಿರ ರೂ.ನಿಂದ 18 ಸಾವಿರ ರೂ.ಗೆ ಹೆಚ್ಚಿಸಬೇಕು. ಉಪಧನವನ್ನು 15 ದಿನದಿಂದ ಒಂದು ತಿಂಗಳಿಗೆ ವಿಸ್ತರಿಸಬೇಕು. ಇಪಿಎಫ್ ಹೆಚ್ಚುವರಿ ಪಿಂಚಣಿಯನ್ನು ಎಲ್ಲ ವಿಭಾಗದ ಕಾರ್ಮಿಕರಿಗೆ ಜಾರಿಗೊಳಿಸಬೇಕು. ಅಂಗನವಾಡಿ, ಆಶಾ ಮತ್ತು ಬಿಸಿಯೂಟದ ಕಾರ್ಮಿಕರ ಮಾಸಿಕ ಗೌರವಧನ ಹೆಚ್ಚಿಸಬೇಕು. ಅವರ ಸೇವೆ ಕಾಯಂಗೊಳಿಸಬೇಕು. ಬ್ಯಾಂಕಿಂಗ್ ಉದ್ಯಮದಲ್ಲಿ ವಾರಕ್ಕೆ 5 ದಿನಗಳ ಕೆಲಸದ ಪದ್ಧತಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಒಳ ಮತ್ತು ಹೊರಗುತ್ತಿಗೆ ನೌಕರರ ಹುದ್ದೆಗಳ ಮಂಜೂರಾತಿ ಪಡೆದು ಸೇವೆಯ ಆಧಾರದ ಮೇಲೆ ಕಾಯಂ ಮಾಡಬೇಕು. ಸರ್ಕಾರದ ಎಲ್ಲ ಇಲಾಖೆಯಲ್ಲಿನ ಒಳ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿ ಕೈಬಿಡಬೇಕು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಭ್ರಷ್ಟಾಚಾರಕ್ಕೆ ಮುಕ್ತಿ ಹಾಡಬೇಕು. ಇದುವರೆಗೆ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಲ್.ವಿಶ್ವನಾಥ್, ಪ್ರಮುಖರಾದ ಶಂಕರ್, ರುದ್ರೇಶ್ ಇತರರಿದ್ದರು.