ಸೊರಬದಲ್ಲಿ ರೈತರ ಧರಣಿ ಸ್ಥಳಕ್ಕೆ ಸಾಗರ ಎಸಿ ವೀರೇಶ್‌ಕುಮಾರ್ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿ ಮನವಿ ಸ್ವೀಕರಿಸಿದರು. ಮಂಜುನಾಥ, ಮಹೇಶ್, ಸುಭಾಷ್‌ಚಂದ್ರ, ಇತರರಿದ್ದರು. 
ಶಿವಮೊಗ್ಗ

ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಒತ್ತಾಯ

ಜಿ. ಗಜೇಂದ್ರ
ಸೊರಬ: ತಾಲೂಕಿನ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಮಂಗಳವಾರವೂ ಧರಣಿ ನಡೆಸಿದರು.
ಮಂಗಳವಾರ ಪ್ರತಿಭಟನೆಯಲ್ಲಿ ಮಾತನಾಡಿದ ಮಲೆನಾಡು ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತಕಾಯದೆ ಅನ್ಯಾಯ ಎಸಗುತ್ತಿವೆ. ಮಲೆನಾಡಿನ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.
ಅರಣ್ಯ ಹಕ್ಕು ಕಾಯ್ದೆಯನ್ನು ಎಲ್ಲ ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಜಾರಿಗೆ ಬಂದಿಲ್ಲ. ಸುಪ್ರೀಂ ಕೋರ್ಟ್ ಅರಣ್ಯ ಭೂಮಿ ಸಾಗುವಳಿದಾರರಿಗೆ ನ್ಯಾಯ ಕೊಡಿ ಎಂದು ಹೇಳಿ 5 ವರ್ಷಗಳು ಕಳೆದರೂ ಸರ್ಕಾರ ಆದೇಶವನ್ನು ಪಾಲಿಸಿಲ್ಲ. ವಿಚಾರಣೆ ಮಾಡದೆ 3 ಲಕ್ಷ ಅರ್ಜಿಗಳನ್ನು ವಜಾ ಮಾಡಿ ಅನ್ಯಾಯ ಮಾಡಿವೆ. ರಾಜ್ಯದ ಸಂಸದರು ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ, ಅರಣ್ಯ ಹಕ್ಕು ಸಮಿತಿಯ ಸಭೆಯನ್ನು ಒಮ್ಮೆಯೂ ನಡೆಸಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಸಾಗರ ಎಸಿ ವೀರೇಶ್‌ಕುಮಾರ್, ಸಾಗರ ಮೆಸ್ಕಾಂ ಇಇ ಚಂದ್ರಶೇಖರ್, ಸೊರಬ ಎಇಇ ಸತ್ಯಪ್ರಕಾಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ನಂತರ ಧರಣಿ ಹಿಂಪಡೆದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಮಹೇಶ್, ತಾಲೂಕು ಅಧ್ಯಕ್ಷ ಸುಭಾಷ್‌ಚಂದ್ರ, ಹರೀಶ್, ರೈತ ಮುಖಂಡರಾದ ಚಂದ್ರಶೇಖರ ಬಾಪಟ್, ದಾನೇಶ್, ನಾಗೇಂದ್ರಪ್ಪ, ಸುರೇಶ್ ನಾಯ್ಕ ಇತರರಿದ್ದರು.