ಶಿವಮೊಗ್ಗ ಜಿಪಂ ಸಭಾಂಗಣದಲ್ಲಿ ಫಲಾನುಭವಿಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚೆಕ್ ವಿತರಿಸಿದರು. ಎನ್.ಹೇಮಂತ್, ರಾಜು ಅಂಜಿ, ಬಬೂಲ್ ಬೊರಾಡ್ ಲಿಯೋ, ಪಿ.ಶರತ್ ಗೌಡ, ಹನುಮಂತಪ್ಪ ಇದ್ದರು. 
ಶಿವಮೊಗ್ಗ

ಕಟ್ಟಕಡೆಯ ವ್ಯಕ್ತಿಗೂ ಕೇಂದ್ರದ ಯೋಜನೆಗಳನ್ನು ತಲುಪಿಸಿ । Lead Bank meeting

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ಸ್ಥಿರತೆ, ಹಣಕಾಸಿನ ಪಾರದರ್ಶಕತೆ ಗುರಿಯಾಗಿಸಿ ಯೋಜನೆ ಜಾರಿ
  • ಜಿಲ್ಲಾಮಟ್ಟದ ಸಲಹಾ ಸಮಿತಿ, ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ
ಶಿವಮೊಗ್ಗ: ಕೇಂದ್ರ ಸರ್ಕಾರ(Centrol govt) ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಯೊಂದಿಗೆ ಆರ್ಥಿಕ ಸ್ಥಿರತೆ, ಹಣಕಾಸಿನ ಪಾರದರ್ಶಕತೆ ಮತ್ತು ಸಮಾವೇಶಿತ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಸಲಹಾ ಸಮಿತಿ ಹಾಗೂ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಬ್ಯಾಂಕಿಂಗ್(Banking) ಮತ್ತು ಆರ್ಥಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಪ್ರಧಾನಿ ನರೇಂದ್ರ ಮೋದಿ(Narendra modi) ಅವರ ಪ್ರಮುಖ ಧ್ಯೇಯವಾಗಿದೆ. ಪಿಎಂ-ಸ್ವನಿ, ಮುದ್ರಾ ಯೋಜನೆ, ಪಿಎಂ-ವಿಶ್ವಕರ್ಮ, ಪಿಎಂ-ಸೂರ್ಯಘರ್ ಹಾಗೂ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್‌ನಂತಹ ಮಹತ್ವಾಕಾಂಕ್ಷಿ ಯೋಜನೆಗಳು ಕೇವಲ ಅಂಕಿ ಅಂಶಗಳಿಗೆ ಸೀಮಿತವಾಗದೆ, ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು.
ಬ್ಯಾಂಕಿಂಗ್ ಅಧಿಕಾರಿಗಳು ತ್ವರಿತಗತಿಯಲ್ಲಿ ಫಲಾನುಭವಿ ಅರ್ಜಿಯನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಲ ಸೌಲಭ್ಯ ಕೋರಿ ಬರುವ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ಉದ್ಯಮಿಗಳಿಗೆ ಅನಗತ್ಯ ಅಲೆದಾಟ ತಪ್ಪಿಸಬೇಕು. ಬ್ಯಾಂಕ್ ಅಧಿಕಾರಿ(Bank officers)ಗಳು ವಿಳಂಬ ಧೋರಣೆಯನ್ನು ತೋರದೆ, ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವಂತೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಸಾಂಕೇತಿಕವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ಪಿಎಂಎಫ್‌ಎಂಇ, ಪಿಎಂಇಜಿಪಿ, ಪಿಎಂಎಸ್‌ಜಿಎಂಬಿವೈ ಮತ್ತು ಪಿಎಂಜೆಜೆಬಿವೈ ಅಡಿ 8 ಫಲಾನುಭವಿಗಳಿಗೆ 1.30 ಕೋಟಿ ರೂ.ಗೂ ಹೆಚ್ಚು ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಜಿಪಂ ಸಿಇಒ ಎನ್.ಹೇಮಂತ್, ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರಾಜು ಅಂಜಿ, ಆರ್‌ಬಿಐ ಎಜಿಎಂ ಬಬೂಲ್ ಬೊರಾಡ್ ಲಿಯೋ, ನಬಾರ್ಡ್‌ನ ಡಿಡಿಎಂ ಪಿ.ಶರತ್ ಗೌಡ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹನುಮಂತಪ್ಪ ಹಾಗೂ ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.