ಸೊರಬ ಕ್ಲಸ್ಟರ್‌ನಲ್ಲಿ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ಹಸ್ತಾಂತರ ಮಾಡುತ್ತಿರುವುದು. 
ಶಿವಮೊಗ್ಗ

ಮಕ್ಕಳಿಗೆ ಶೂ ವಿತರಣೆ ವಿಳಂಬ | School opening ceremony

ಪ್ರಮುಖ ಮುಖ್ಯಾಂಶಗಳು

  • ಒಂದು ತಿಂಗಳು ತಡವಾಗಲಿದೆ ಪೂರೈಕೆ
  • ಕೆಲವು ತಾಲೂಕುಗಳಲ್ಲಿ ಚಪ್ಪಲಿಗೆ ಬೇಡಿಕೆ
  • ಪಠ್ಯಪುಸ್ತಕ ಪೂರೈಕೆ, ವಾರದಲ್ಲಿ ಸಮವಸ್ತ್ರ ಸರಬರಾಜು
ನವೀನ್ ಬಿಲ್ಗುಣಿ ಶಿವಮೊಗ್ಗ
ಇನ್ನೊಂದು ವಾರದಲ್ಲಿ ನೂತನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಶಿಕ್ಷಣ ಇಲಾಖೆ(Education dept) ಆರಂಭೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಪಠ್ಯಪುಸ್ತಕಗಳು ಕ್ಲಸ್ಟರ್‌ಗಳ ಮೂಲಕ ಶಾಲೆಗಳಿಗೆ ಪೂರೈಕೆ ಆಗುತ್ತಿದ್ದು, ಇನ್ನೊಂದು ವಾರದಲ್ಲಿ ಸಮವಸ್ತ್ರ(Uniform) ಕೂಡ ವಿದ್ಯಾರ್ಥಿಗಳ ಕೈಸೇರಲಿದೆ. ಆದರೆ ಶೂ ವಿತರಣೆ ವಿಳಂಬವಾಗಲಿದೆ.
ಜಿಲ್ಲಾದ್ಯಂತ 2,290ಕ್ಕೂ ಅಧಿಕ ಪ್ರಾಥಮಿಕ ಮತ್ತು 390ಕ್ಕೂ ಅಧಿಕ ಪ್ರೌಢಶಾಲೆಗಳಿವೆ. ಶಿಕ್ಷಣ ಇಲಾಖೆ ಈಗಾಗಾಲೇ ಶಾಲಾ ದಾಖಲಾತಿಗೆ ಕ್ರಮ ಕೈಗೊಂಡಿದೆ. ಖಾಸಗಿ ಶಾಲೆಗಳ ಪೈಪೋಟಿ ನಡುವೆ ಗ್ರಾಮೀಣ ಭಾಗದಲ್ಲಿ ಮಕ್ಕಳ ದಾಖಲಾತಿ(Child registration) ಕೊಂಚ ತಗ್ಗಿದ್ದರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಇಲಾಖೆ ವಿಶೇಷ ಅಭಿಯಾನ(Special campaign) ಕೈಗೊಂಡಿದೆ. ಆದರೆ ಎಂದಿನಂತೆ ಈ ವರ್ಷವೂ 1ರಿಂದ ಎಸ್‌ಎಸ್‌ಎಲ್‌ಸಿವರೆಗಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶೂ ಮತ್ತು ಎರಡು ಜತೆ ಸಾಕ್ಸ್ ಪೂರೈಕೆ ತಡವಾಗಲಿದೆ.
ರಾಜ್ಯದ ಸುಮಾರು 36 ಲಕ್ಷ ವಿದ್ಯಾರ್ಥಿಗಳಿಗೆ ಶೂ ಮತ್ತು ಎರಡು ಜತೆ ಸಾಕ್ಸ್ ಖರೀದಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಸಹ ಆಗಿದೆ. ಆದರೂ ಶಿಕ್ಷಣ ಇಲಾಖೆಗೆ ಸಕಾಲಕ್ಕೆ ಶೂಗಳನ್ನು ಮಕ್ಕಳಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶಾಲಾ ಆರಂಭೋತ್ಸವ(School opening ceremony)ದಿಂದಲೇ ಶೂ ಹಾಕಿಕೊಂಡು ಶಾಲೆಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ. ಕನಿಷ್ಠ ಒಂದೆರಡು ತಿಂಗಳು ಕಾಯುವುದು ಅನಿವಾರ್ಯವಾಗಲಿದೆ.
ದಾಖಲಾತಿ ಮುಗಿದ ಬಳಿಕ ಹಣ ಬಿಡುಗಡೆ: 1ರಿಂದ 5ನೇ ತರಗತಿವರೆಗಿನ ಒಬ್ಬ ವಿದ್ಯಾರ್ಥಿಗೆ 265 ರೂ., 6ರಿಂದ 8ನೇ ತರಗತಿ ಒಬ್ಬ ವಿದ್ಯಾರ್ಥಿಗೆ 295 ರೂ. ಹಾಗೂ 9ರಿಂದ 10ನೇ ತರಗತಿ ವಿದ್ಯಾರ್ಥಿಗೆ 325 ರೂ. ವರೆಗೆ ಖರ್ಚು ಮಾಡಿ ಶೂ ಅಥವಾ ಚಪ್ಪಲಿ(Shoe or slipper)ನೀಡಬೇಕಿದೆ. ಈ ಹಿಂದೆಲ್ಲ ಶೂ ಖರೀದಿಗೆ ಕಳೆದ ಸಾಲಿನ ಆಧಾರದ ಮೇಲೆ ಶಾಲೆಗಳಿಗೆ ಹಣ ಪಾವತಿಸಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಸಮಸ್ಯೆ ಆಗುತ್ತಿತ್ತು. ಅದನ್ನು ಸರಿಪಡಿಸಲು ಈ ಬಾರಿ ಶಾಲಾ ದಾಖಲಾತಿ ಪೂರ್ಣಗೊಂಡ ಬಳಿಕವೇ ಶೂ ಅಥವಾ ಚಪ್ಪಲಿ ಪೂರೈಕೆಗೆ ಹಣ ಬಿಡುಗಡೆ ಮಾಡಲು ಇಲಾಖೆ ನಿರ್ಧರಿಸಿದೆ. ಈ ಕಾರಣಕ್ಕಾಗಿ ಈ ಬಾರಿ ವಿತರಣೆ ವಿಳಂಬವಾಗಲಿದೆ.
ಚಪ್ಪಲಿಗೆ ಬೇಡಿಕೆ: ಶೈಕ್ಷಣಿಕ ವರ್ಷದ ಆರಂಭದಲ್ಲೇ ಶೂ, ಎರಡು ಜತೆ ಸಾಕ್ಸ್ ಮತ್ತು ಚಪ್ಪಲಿ ಪೂರೈಕೆಗೆ ಸರ್ಕಾರ 104 ಕೋಟಿ ರೂ. ಬಿಡುಗಡೆ ಮಾಡಿದೆ. ಅಧಿಕ ಮಳೆ ಬೀಳುವ ಉತ್ತರ ಕನ್ನಡ(Uttara kannada), ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ(Shimogga) ಜಿಲ್ಲೆಗಳ ಕೆಲ ಶಾಲೆಗಳಲ್ಲಿ ಶೂ ಬದಲಿಗೆ ಚಪ್ಪಲಿ ನೀಡುವಂತೆ ಶಿಕ್ಷಕರು ಮತ್ತು ಪಾಲಕರಿಂದ ಬೇಡಿಕೆ ವ್ಯಕ್ತವಾಗಿದೆ. ಸಾಗರ, ಸೊರಬ ತಾಲೂಕಿನ ಕೆಲ ಶಾಲೆಗಳ ಮಕ್ಕಳಿಗೆ ಚಪ್ಪಲಿ ಭಾಗ್ಯವೂ ಸಿಗಲಿದೆ.

ಇನ್ನೊಂದು ವಾರದಲ್ಲಿ ಸಮವಸ್ತ್ರ ಪೂರೈಕೆ

ಮೊದಲ ಹಂತ(First stage)ದಲ್ಲಿ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಈ ವರ್ಷ ಸಮವಸ್ತ್ರಗಳ ಸರಬರಾಜು ಕೇಂದ್ರ ಕಚೇರಿ(Head Office)ಯಿಂದಲೇ ಮೇಲ್ವಿಚಾರಣೆ ಆಗುತ್ತಿರುವುದು ಈ ಬಾರಿಯ ವಿಶೇಷ. ಶಾಲಾ ಆರಂಭೋತ್ಸವಕ್ಕೆ ಮುನ್ನವೇ ಸಮವಸ್ತ್ರ ಪೂರೈಸುವ ಉದ್ದೇಶ ಶಿಕ್ಷಣ ಇಲಾಖೆಯಿದೆ. ಹಾಗಾಗಿ ಇನ್ನೊಂದು ವಾರದಲ್ಲಿ ಸಮವಸ್ತ್ರ ಪೂರೈಕೆ ಆಗಲಿವೆ ಎಂಬುದು ಶಿಕ್ಷಣ ಇಲಾಖೆ ಲೆಕ್ಕಾಚಾರ. ಅವು ಇಲಾಖೆಗೆ ಕೈಸೇರಿ, ಆನಂತರ ವಿದ್ಯಾರ್ಥಿಗಳಿಗೆ ತಲುಪಿಲಿದೆ. ಹೊಲಿಗೆಗೆ ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ.

ಶೇ.90ರಷ್ಟು ಪಠ್ಯಪುಸ್ತಕ ಬಿಡುಗಡೆ

ಶಿಕ್ಷಣ ಸಚಿವರ ತವರು ಜಿಲ್ಲೆ ಶಿವಮೊಗ್ಗಕ್ಕೂ ಶೇ.90ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿವೆ. ಪುಸ್ತಕಗಳು ಬಂದಂತೆ ಬಿಇಒ(BEO)ಗಳ ಮೂಲಕ ಆಯಾ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಬಾಕಿ ಪುಸ್ತಕಗಳು ಕೂಡ ವಾರಾಂತ್ಯದಲ್ಲಿ ಪೂರೈಕೆ ಆಗಲಿವೆ. ಪ್ರಸ್ತುತ ಶಾಲಾ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡುವ ಹಾಗೂ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ(Bisiyuta), ಕ್ಷೀರಭಾಗ್ಯ ಸೇರಿ ಇತರೆ  ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ಗ್ರಾಮಸ್ಥರೇ ಮಕ್ಕಳನ್ನು ಸ್ವಾಗತಿಸುವರು. ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕಾರ, ಸಿಹಿಯೂಟ, ಹಬ್ಬದ ವಾತಾವರಣ ಸೃಷ್ಟಿಸಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. 
  
"

ಜೂ.1ರಂದು ಶಾಲಾ ಆರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗಾಗಲೇ ಪಠ್ಯಪುಸ್ತಕ ಪೂರೈಕೆ ಆಗಿದ್ದು, ಸಮವಸ್ತ್ರ ಬರಬೇಕಿದೆ. ಸರ್ಕಾರದ ಹಂತದಲ್ಲೇ ಶೂ ವಿತರಣೆ ಆಗಲಿದ್ದು, ಒಂದು ತಿಂಗಳು ವಿಳಂಬ ಆಗಲಿದೆ. ಕೆಲವೆಡೆ ಶೂ ಬದಲಿಗೆ ಚಪ್ಪಲಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲೇ ಕನ್ನಡ-ಇಂಗ್ಲಿಷ್ ಮಾಧ್ಯಮ ಇರುವುದರಿಂದ ಹೆಚ್ಚು ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ.

— ಎಸ್.ಆರ್.ಮಂಜುನಾಥ್, ಡಿಡಿಪಿಐ