ಶಿವಮೊಗ್ಗದಲ್ಲಿ ಬಹುಮುಖಿ ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಮತ್ತು ಕೃತಕ ಬುದ್ಧಿಮತ್ತೆ ಎಂಬ ವಿಷಯದ ಕುರಿತು ಡಾ. ಯು.ಬಿ.ಪವನಜ ಮತನಾಡಿದರು. 
ಶಿವಮೊಗ್ಗ

ಎಐ ಬಳಕೆಯಿಂದ ಆಳ ಚಿಂತನೆ ಕ್ಷೀಣ I usess of ai

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ ಬರಹಗಾರ ಡಾ.ಪವನಜ ಕಳವಳ
  • ಬಹುಮುಖಿ ಸಂಘಟನೆಯ ಕಾರ್ಯಕ್ರಮ
ಶಿವಮೊಗ್ಗ: ಪ್ರಸ್ತುತ ಸನ್ನಿವೇಶದಲ್ಲಿ ಎಐ (ai) (ಕೃತಕ ಬುದ್ಧಿಮತ್ತೆ) ಬಳಕೆ ಹೆಚ್ಚುತ್ತಿರುವ ಕಾರಣ ನಮ್ಮ ಸೃಜನಶೀಲ ಬರವಣಿಗೆ, ಆಳವಾದ ಚಿಂತನೆ ಕಡಿಮೆಯಾಗುತ್ತಿದೆ. ಎಐ ಮೇಲಿನ ಅವಲಂಬನೆ (dpendency) ದಿನೇದಿನೆ ಹೆಚ್ಚುತ್ತಿದೆ ಎಂದು ವಿಶ್ವ ಕನ್ನಡ ಫೌಂಡೇಷನ್‌ನ ನಿರ್ದೇಶಕ, ವೈಜ್ಞಾನಿಕ ಬರಹಗಾರ ಡಾ. ಯು.ಬಿ.ಪವನಜ (pavanaja) ಕಳವಳ ವ್ಯಕ್ತಪಡಿಸಿದರು.
ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಮತ್ತು ಕೃತಕ ಬುದ್ಧಿಮತ್ತೆ ಎಂಬ ವಿಷಯ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಣೆ ನೀಡಿದ ಅವರು, ಮನುಷ್ಯರಂತೆ ಆಲೋಚಿಸುವ, ಕಲಿಯುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಂಪ್ಯೂಟರ್ ಅಥವಾ ಯಂತ್ರಗಳಿಗೆ ನೀಡುವ ಮೂಲಕ ಕೃತಕ ಬುದ್ಧಿಮತ್ತೆಯನ್ನು ಪಡೆಯಬಹುದು. ಎಐ ಯಂತ್ರಗಳು ಸ್ವಂತ ಅನುಭವದಿಂದ ಕಲಿಯುತ್ತವೆ, ತಪ್ಪನ್ನು ತಿದ್ದಿಕೊಳ್ಳುತ್ತವೆ ಹಾಗೂ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತವೆ ಎಂದು ಹೇಳಿದರು.
ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಬಗ್ಗೆ ಮೂರು ದಶಕಗಳ ಹಿಂದೆ ಮೊದಲ ವಿಚಾರ ಸಂಕಿರಣ ನಡೆದಿದ್ದು ಮುಂಬೈನಲ್ಲಿ. 1997ರಲ್ಲಿ ನಡೆದಿದ್ದ ಆ ವಿಚಾರ ಸಂಕಿರಣದಲ್ಲಿ ಗಣಕ ಯಂತ್ರದಲ್ಲಿ ಕನ್ನಡ ಭಾಷೆಯನ್ನು ಹೇಗೆ ಬಳಕೆ ಮಾಡಬಹುದೆಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು ಎಂದರು.
ಕಂಪ್ಯೂಟರ್‌ನಲ್ಲಿ ಸಾಂಪ್ರದಾಯಿಕ ಪ್ರೋಗ್ರಾಮಿಂಗ್ ಮಾಡುವುದಕ್ಕೂ ಕೃತಕ ಬುದ್ಧಿಮತ್ತೆ ಬಳಕೆಗೂ ಸಾಕಷ್ಟು ವ್ಯತ್ಯಾಸವಿದೆ. ಸಾಂಪ್ರದಾಯಿಕ ಪ್ರೋಗ್ರಾಮಿಂಗ್ ವಿಧಾನಕ್ಕಿಂತಲೂ ಈಗ ಹೆಚ್ಚು ಪ್ರಚಲಿತದಲ್ಲಿರುವುದು ಎಐ. ಕ್ಷಣಾರ್ಧದಲ್ಲಿ ನಾವು ಬಯಸುವ ಮಾಹಿತಿಯನ್ನು ಎಲ್ಲ ಮೂಲಗಳಿಂದ ಜಾಲಾಡಿ ಒದಗಿಸುವ ಶಕ್ತಿ ಎಐಗೆ ಇದೆ ಎಂದು ಅಭಿಪ್ರಾಯಪಟ್ಟರು.
ಬಹುಮುಖಿ ಸಂಘಟನೆಯ ಪ್ರಮುಖ, ಸಾಹಿತಿ ಡಾ. ಎಚ್.ಎಸ್.ನಾಗಭೂಷಣ ಪ್ರಾಸ್ತಾವಿಕ ಮಾತನಾಡಿದರು.

ದೊಡ್ಡ ಭಾಷಾ ಮಾದರಿ

ಅತಿ ದೊಡ್ಡ ಭಾಷಾ ಮಾದರಿಯೇ ಎಐನಲ್ಲಿದೆ. ಅದಕ್ಕೆ ಸರಿಯಾದ ಆಜ್ಞೆ ನೀಡುವುದು ಮುಖ್ಯ. ನಮಗೇನು ಬೇಕು ಎಂಬುದನ್ನು ಸ್ಪಷ್ಟವಾಗಿ ಎಐಗೆ ತಿಳಿಸಿಬೇಕು. ಆಗ ಮಾತ್ರ ಸಮರ್ಪಕ ಮಾಹಿತಿ ಸಿಗುತ್ತದೆ. ಇಲ್ಲವಾದಲ್ಲಿ ಸಮಗ್ರ ಮಾಹಿತಿ ಪಡೆಯುವುದು ಸಾಧ್ಯವಿಲ್ಲ. ಅದರಿಂದ ನಾವು ಬಯಸಿದ ಪ್ರಯೋಜನವಾಗುವುದಿಲ್ಲ. ಸಾವಿರಾರು ಪುಸ್ತಕಗಳು, ಚಿತ್ರಗಳು, ಧ್ವನಿಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಎಐಗೆ ಇದೆ. ಇಂದು ಚಾಟ್ ಜಿಪಿಟಿಗಿಂತಲೂ ಗೂಗಲ್ ಜೆಮಿನಿ ಕನ್ನಡಕ್ಕೆ ಹೆಚ್ಚು ಹೊಂದಿಕೆಯಾಗಿದೆ. ಕನ್ನಡ ಪಾಲಿಗೆ ಇದು ಅತ್ಯುತ್ತಮ ಎಐ ಮಾದರಿ ಎಂದು ಯು.ಬಿ.ಪವನಜ ಹೇಳಿದರು.

ಕನ್ನಡದಲ್ಲಿ ಸೃಜನಾತ್ಮಕ ಬಳಕೆ

ಕನ್ನಡ ಸಾಹಿತ್ಯದಲ್ಲಿ ಎಐ ಸೃಜನಾತ್ಮಕವಾಗಿ ಬಳಕೆಯಾಗುತ್ತಿದೆ. ಇದನ್ನು ಬಳಸಿಕೊಂಡು ಲೇಖನಗಳನ್ನು ತಯಾರು ಮಾಡಬಹುದು. ಎಐ ನಮಗೆ ರಂಜನೀಯ ಭಾಷೆ ನೀಡುವುದಿಲ್ಲ. ಆದರೆ ಲೇಖನ ಸಿದ್ಧಪಡಿಸಲು ಉತ್ತಮ ಮಾಹಿತಿ ನೀಡಬಲ್ಲದು. ಪದ ವಿಂಗಡಣೆ, ಶಬ್ದಾರ್ಥ ವಿಶ್ಲೇಷಣೆ, ಅನುವಾದ ಸಂಸ್ಕರಣೆ ಹೀಗೆ ಸಹಜ ಭಾಷಾ ಸಂಸ್ಕರಣೆ ಎಐನಲ್ಲಿ ನಡೆಯುತ್ತದೆ. ಭಾಷೆಯ ಮಾದರಿಗಳ ಪತ್ತೆಗೂ ಇದು ಸೂಕ್ತವಾಗಿದೆ ಎಂದು ಪವನಜ ತಿಳಿಸಿದರು.

ಎಐ ಬಳಕೆ ಬಗ್ಗೆ ಎಚ್ಚರವಿರಲಿ

ಕೃತಕ ಬುದ್ಧಿಮತ್ತೆ ಬಳಕೆ ಮಾಡುವವರು ಸಾಕಷ್ಟು ಎಚ್ಚರವಾಗಿರಬೇಕು. ಇದು ಒದಗಿಸುವ ಮಾಹಿತಿಯ ನಿಖರತೆಯನ್ನು ಒಮ್ಮೆ ಪರೀಕ್ಷಿಸಿಕೊಳ್ಳುವುದು ಒಳಿತು. ಗೌಪ್ಯತೆ, ಭದ್ರತೆ ಮೀರಿದ, ಪೂರ್ವಗ್ರಹಪೀಡಿತ ಫಲಿತಾಂಶಗಳು ಕೆಲವೊಮ್ಮೆ ಎಐ ಮೂಲಕ ನಮಗೆ ದೊರೆಯುವ ಸಾಧ್ಯತೆಗಳಿರುತ್ತವೆ. ಎಐ ಮೂಲಕ ಲೇಖನ ಸಿದ್ಧಪಡಿಸಿಕೊಳ್ಳುವಾಗ ಸಾಹಿತ್ಯದ ಕೃತಿಚೌರ್ಯವಾಗುವ ಅಪಾಯವೂ ಇದೆ. ಹಕ್ಕುಸ್ವಾಮ್ಯದ ಬಗ್ಗೆಯೂ ಅರಿವಿರಬೇಕು ಎಂದು ಯು.ಬಿ.ಪವನಜ ಹೇಳಿದರು.