ತೀರ್ಥಹಳ್ಳಿಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಹೆದ್ದೂರು ನವೀನ್ ಮಾತನಾಡಿದರು. ಪ್ರಶಾಂತ್ ಕುಕ್ಕೆ, ಬೇಗುವಳ್ಳಿ ಕವಿರಾಜ್, ಸೋಮಶೇಖರ್, ಶಂಕರನಾರಾಯಣ ಐತಾಳ್, ರಕ್ಷಿತ್, ಸುಧಾಕರ ಇತರರಿದ್ದರು.
ತೀರ್ಥಹಳ್ಳಿ: ರಾಜ್ಯ ಸರ್ಕಾರ ಬಡವರಿಗೆ ವಿವಿಧ ಮಾಸಾಶನ, ಪಿಂಚಣಿ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಪ್ರಮುಖರು, ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 16 ಲಕ್ಷ, ತಾಲೂಕಿನಲ್ಲಿ ಮೂರು ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಮಾಸಾಶನ ಪಿಂಚಣಿಯಿಂದ ವಂಚಿಸಲಾಗುತ್ತಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಚಿಸಿದ ಅದರ ಅಧ್ಯಕ್ಷರಿಗೆ ಸಂಬಳ ಕೊಟ್ಟು ಸರ್ಕಾರ ಸಾಕುತ್ತಿದೆ. ಆದರೆ ಈವರೆಗೂ ಸೌಲಭ್ಯ ವಂಚಿತರ ಅಹವಾಲು ಕೇಳುವ ಸೌಜನ್ಯ ಬೆಳೆಸಿಕೊಂಡಿಲ್ಲ ಎಂದು ದೂರಿದರು.
ಅಧಿಕಾರಿಗಳಿಗೆ ತೊಂದರೆ ಕೊಟ್ಟು ಮಾಜಿ ಶಾಸಕರು ತಮ್ಮ ಅವಧಿ ಕಳೆದಿದ್ದಾರೆ. ಆರಗ ಜ್ಞಾನೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇನ್ನು ಮುಂದೆ ಕಿಮ್ಮನೆ ರತ್ನಾಕರ್ ಅವರು ಕಾಯಂ ಮಾಜಿ ಆಗಿಯೇ ಇರುತ್ತಾರೆ.
ಆರ್ಥಿಕ ದಿವಾಳಿಯಾಗಿರುವ ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿಗೆ ಹಣ ಇಲ್ಲದಂತಾಗಿದೆ. ಅದಕ್ಕಾಗಿ ಬಡವರ ಪಡಿತರ ಚೀಟಿ ರದ್ದುಪಡಿಸುವ ಹೀನಾಯ ಸ್ಥಿತಿಗೆ ತಲುಪಿದೆ. ಹೊಸ ಪಡಿತರ ಚೀಟಿ ನೀಡುವುದನ್ನು ನಿಲ್ಲಿಸಿದೆ. ನೇರವಾಗಿ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲೂಕು ಅಧ್ಯಕ್ಷ ಹೆದ್ದೂರು ನವೀನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಗುವಳ್ಳಿ ಕವಿರಾಜ್, ಪ್ರಮುಖರಾದ ಸೋಮಶೇಖರ್, ಶಂಕರನಾರಾಯಣ ಐತಾಳ್, ರಕ್ಷಿತ್, ಸುಧಾಕರ, ಯಶಸ್ವಿ, ಸಂತೋಷ್ ದೇವಾಡಿಗ, ಮೋಹನ್ ಶೆಟ್ಟಿ ಇದ್ದರು.