ಮಳೆಯಿಂದ ದೇವಂಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಹಾನಿಗೀಡಾಗಿರುವುದು.
ತೀರ್ಥಹಳ್ಳಿ: ಮಳೆಯ ಕಾರಣದಿಂದ ತಾಲೂಕಿನ ದೇವಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಕುಸಿದಿದ್ದು, ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳೊಂದಿಗೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.
75 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಹೆಂಚಿನ ಕಟ್ಟಡ ಶಿಥಿಲವಾಗಿದೆ. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಭಯದಿಂದಲೇ ವ್ಯಾಸಂಗ ಮಾಡುವಂತಾಗಿದೆ. ಮಾಡಿನ ಪಕಾಸಿ ರೀಪುಗಳು ಗಾಳಿ ಮಳೆ ಹೊಡೆತಕ್ಕೆ ಮುರಿದು, ಹೆಂಚುಗಳು ಬೀಳುತ್ತಿವೆ. ಮಳೆಯ ನೀರು ಸೋರದಂತೆ ಪ್ಲಾಸ್ಟಿಕ್ ಹೊದಿಸಲಾಗಿದೆ ಎಂದರು.
ಖಾಸಗಿ ಶಾಲೆಗಳ ಆರಂಭಕ್ಕೆ ಮುನ್ನ ಉತ್ತಮ ಸ್ಥಿತಿಯಲ್ಲಿದ್ದ ಈ ಶಾಲೆ ಮೂಲ ಸೌಕರ್ಯಗಳಿಂದ ಸೊರಗಿದೆ. ಹೆಚ್ಚಾಗಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಓದುವ ಈ ಶಾಲೆಯ ದುಸ್ಥಿತಿಯನ್ನು ಸಚಿವ ಮಧು ಬಂಗಾರಪ್ಪ ವೀಕ್ಷಿಸಬೇಕು. ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪಾಳಕರು ಆಗ್ರಹಿಸಿದರು.