ಸಾಗರದ ಶ್ರೀ ಆದಿನಾಥ ಮಂದಿರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಅಶೋಕ ಇಂದ್ರ, ಎಸ್.ವಿ.ಹಿತಕರ ಜೈನ್, ಗಜೇಂದ್ರ ಜೈನ್, ಶ್ರುತಿ ಜೈನ್, ಸುನಂದಾ ಜೈನ್ ಇತರರಿದ್ದರು.
ಸಾಗರ: ಪಟ್ಟಣದಲ್ಲಿ ಶ್ರೀ ಆದಿನಾಥ ತೀರ್ಥಂಕರರ ಜಿನಬಿಂಬಕ್ಕೆ ವಿಶೇಷ ಅಭಿಷೇಕ, ಅರ್ಚನೆ ಜತೆಗೆ ಚಾತುರ್ಮಾಸ್ಯ ನಿಮಿತ್ತ ಕಲಶ ಸ್ಥಾಪನೆಯೊಂದಿಗೆ ಬುಧವಾರ ಗುರುಪೂರ್ಣಿಮೆ ಆಚರಿಸಲಾಯಿತು.
ಸಾಗರ ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ನೆಹರು ಮೈದಾನದಲ್ಲಿರುವ ಶ್ರೀ ಆದಿನಾಥ ಮಂದಿರದಲ್ಲಿ ಚಾತುರ್ಮಾಸ್ಯ ನಿಮಿತ್ತ ಜಲ, ಗಂಧ, ಚಂದನ ಮತ್ತು ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. 4 ತಿಂಗಳು ನಿತ್ಯ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲು ಕಲಶ ಸ್ಥಾಪನೆ ಮಾಡಲಾಯಿತು.
ಸಾಗರದ ಜೈನ ಬಸದಿಯ ಪುರೋಹಿತ ಅಶೋಕ ಇಂದ್ರ ಮಾತನಾಡಿ, ಮಹಾನ್ ವೈದಿಕ ಪಂಡಿತರಾಗಿದ್ದ ಇಂದ್ರಭೂತಿ ಗೌತಮರು ಕೆಲವು ಸಂಶಯಗಳಿಗೆ ಉತ್ತರ ಬಯಸಿ ತೀರ್ಥಂಕರರ ಸ್ಥಾನ ಸಮವಸರಣಕ್ಕೆ ಭೇಟಿ ನೀಡಿದ್ದರು. ಶ್ರೀ ಮಹಾವೀರ ಸ್ವಾಮಿಯ ದಿವ್ಯ ಧ್ವನಿ, ಓಂಕಾರ ಸ್ವರ ಆಲಿಸಿ ಸಂಶಯಗಳನ್ನು ನಿವಾರಿಸಿಕೊಂಡು ಜ್ಞಾನಿಗಳಾಗಿ ಪರಿವರ್ತನೆಯಾದರು. ಶ್ರೀ ಭಗವಾನ್ ಮಹಾವೀರರ ಪರಮ ಶಿಷ್ಯರಾದ ದಿನವೇ ಆಷಾಢ ಶುಕ್ಲ ಪೂರ್ಣಿಮೆಯಾದ್ದರಿಂದ ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ ಎಂದರು.
ಮಳೆಗಾಲವಾದ್ದರಿಂದ ಜೈನ ಮುನಿಗಳು ಮತ್ತು ಆರ್ಯಿಕೆಯರು ಸಂಚಾರವನ್ನು ಮೊಟಕುಗೊಳಿಸಿ ಒಂದೇ ಸ್ಥಳದಲ್ಲಿ ಸ್ವಾಧ್ಯಾಯ,ಪ್ರವಚನ, ವಿಶೇಷ ಪೂಜೆ, ಆರಾಧನೆಗಳ ಮೂಲಕ ಧರ್ಮ ಪ್ರಭಾವನೆ ಬೀರುವ ಮೂಲಕ ಚಾತುರ್ಮಾಸ್ಯ ಸಾರ್ಥಕಗೊಳಿಸುತ್ತಾರೆ. ಚಾತುರ್ಮಾಸ್ಯ ಕೇವಲ ಗುರುಗಳಿಗೆ ಸೀಮಿತವಲ್ಲ. ಶ್ರಾವಕರು ನಿತ್ಯ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆಗಳಲ್ಲಿ ತೊಡಗಿಕೊಳ್ಳುತ್ತಾರೆ. ವಿವಿಧ ಆಚಾರ-ವಿಚಾರಗಳ ಕುರಿತು ಸಂಕಲ್ಪ ಮಾಡಿ ನುಡಿದಂತೆ ನಡೆಯುತ್ತಾರೆ ಎಂದು ತಿಳಿಸಿದರು.
ದಿಗಂಬರ ಜೈನ ಸಮಾಜ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗಜೇಂದ್ರ ಜೈನ್, ಮಾಜಿ ಗೌರವಾಧ್ಯಕ್ಷ ಹೊಯ್ಸಳ ಜೈನ್, ಪ್ರಧಾನ ಕಾರ್ಯದರ್ಶಿ ನ್ಯಾಮಯ್ಯ ಜೈನ್, ಕಾರ್ಯದರ್ಶಿಗಳಾದ ಜಿನದತ್ತ ಜೈನ್, ದೇವರಾಜ್, ನಿರ್ದೇಶಕರಾದ ಸುನಿಲ್ ಜೈನ್, ಹರ್ಷ ಜೈನ್, ಶ್ರುತಿ ನ್ಯಾಮಯ್ಯ ಜೈನ್, ಮಾಜಿ ನಿರ್ದೇಶಕಿ ಸುನಂದಾ ಜೈನ್ ಇತರರಿದ್ದರು.