ಶಿವಮೊಗ್ಗದಲ್ಲಿ ಇತ್ತೀಚೆಗೆ ಸಿಡಬ್ಲುೃಸಿಯಿಂದ ಉಚಿತ ಕಾನೂನು ಸೇವೆಗಳ ಕೇಂದ್ರವನ್ನು ಜಿಲ್ಲಾ ನ್ಯಾಯಾಧೀಶ ಮಂಜುನಾಥ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಉದ್ಘಾಟಿಸಿದರು.
- ಉಚಿತ ಕಾನೂನು ಸೇವಾ ಕೇಂದ್ರ ಸ್ಥಾಪನೆ
- ರಾಜ್ಯದಲ್ಲೇ ಶಿವಮೊಗ್ಗದಲ್ಲಿ ಮೊದಲು ಆರಂಭ
- ಮೂರು ವರ್ಷದಲ್ಲಿ 540 ಕೇಸ್ ದಾಖಲು
ರಾಜ್ಯದಲ್ಲಿ ಪೋಕ್ಸೋ ಪ್ರಕರಣ(POCSO Case
)ಗಳು ಹೆಚ್ಚಿರುವ ಜಿಲ್ಲೆಗಳ ಪೈಕಿ ಶಿವಮೊಗ್ಗ ಮುಂಚೂಣಿಯಲ್ಲಿದೆ. ವರ್ಷದಿಂದ ವರ್ಷಕ್ಕೆ ಪೋಕ್ಸೋ ಕೇಸ್ ಹೆಚ್ಚಳವಾಗುತ್ತಿರುವುದು ಪ್ರಜ್ಞಾವಂತರ ಖ್ಯಾತಿಯ ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ. ಅದನ್ನು ಮನಗಂಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಪ್ರಕರಣಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದು, ರಾಜ್ಯದಲ್ಲೇ ಮೊದಲೆಂಬಂತೆ ಉಚಿತ ಕಾನೂನು ಸೇವೆಗಳ ಕೇಂದ್ರ(Free Legal Service Center)ವನ್ನು ತೆರೆದಿದೆ.
ಜಿಲ್ಲೆಯಲ್ಲಿ 2024ರಿಂದ 2026ರ ಜುಲೈವರೆಗೆ ಒಟ್ಟು 540 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 203, 2025ರಲ್ಲಿ 243, 2026ರಲ್ಲಿ 94 ವರದಿಯಾಗಿದೆ. ಅದೆಷ್ಟೋ ಪ್ರಕರಣಗಳು ಮರ್ಯಾದೆಗೆ ಅಂಜಿ ಮನೆ ಹೊಸ್ತಿಲಲ್ಲೇ ಮರೆಯಾಗಿವೆ. ಇನ್ನು ಕೆಲವು ಕೋರ್ಟ್‌ಗಳಲ್ಲಿ ವಿಚಾರಣೆ ವೇಳೆ ವ್ಯತಿರಿಕ್ತ ಹೇಳಿಕೆಗಳಿಂದ ಬಿದ್ದುಹೋಗಿವೆ. ಇದಕ್ಕೆ ಕಾನೂನು ಅರಿವಿನ ಕೊರತೆ ಕಾರಣ ಎಂಬುದನ್ನು ಅರಿತಿರುವ ಸಿಡಬ್ಲ್ಯೂಸಿ ಸೇವಾ ಕೇಂದ್ರ(CWC Service Center) ತೆರೆದು ಅರಿವು ಮೂಡಿಸುತ್ತಿದೆ.
ಜು.9ರಂದು ಮಲೆನಾಡು ಶಿವಮೊಗ್ಗದಲ್ಲಿ ಸಿಡಬ್ಲ್ಯೂಸಿಯಿಂದ ಉಚಿತ ಕಾನೂನು ಸೇವಾ ಕೇಂದ್ರ ಆರಂಭಗೊಂಡಿದೆ. ಇದುವರೆಗೆ ಹತ್ತಾರು ಪಾಲಕರು ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ವಕೀಲರಿಂದ ಉಚಿತವಾಗಿ ಪಡೆದುಕೊಂಡು ಹೋಗಿದ್ದಾರೆ. ಕೆಲವೆಡೆ ಸಖಿ ಕೇಂದ್ರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(District Legal Services Authority)ದಿಂದ ಉಚಿತವಾಗಿ ಅರಿವು ಮೂಡಿಸುತ್ತಿದ್ದರೂ ಸಿಡಬ್ಲುೃಸಿಯಿಂದ ರಾಜ್ಯ ಮಾತ್ರವಲ್ಲ, ದೇಶದ ಯಾವುದೇ ಜಿಲ್ಲೆಯಲ್ಲೂ ಉಚಿತ ಅರಿವು ಕೇಂದ್ರವಿಲ್ಲ ಎನ್ನುತ್ತಾರೆ ಸಿಡಬ್ಲುೃಸಿ ಅಧಿಕಾರಿಗಳು.
ಶಿವಮೊಗ್ಗ ತಾಲೂಕಲ್ಲೇ ಅತ್ಯಧಿಕ ಕೇಸ್: ಜಿಲ್ಲೆಯ 7 ತಾಲೂಕುಗಳ ಪೈಕಿ ಶಿವಮೊಗ್ಗ, ಸಾಗರ, ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಿವೆ. ಅದರಲ್ಲೂ ಶಿವಮೊಗ್ಗ ತಾಲೂಕಿನಲ್ಲೇ ಅತ್ಯಧಿಕ ಕೇಸ್‌ಗಳಿವೆ. 2024ರಲ್ಲಿ 75, 2025ರಲ್ಲಿ 94 ಮತ್ತು ಪ್ರಸಕ್ತ 2026ರಲ್ಲಿ 41 ಸೇರಿ ಒಟ್ಟಾರೆ 210 ಕೇಸ್‌ಗಳು ವರದಿಯಾಗಿವೆ. ಉಳಿದಂತೆ ಭದ್ರಾವತಿ, ಸಾಗರ, ಶಿಕಾರಿಪುರದಲ್ಲಿ ಕ್ರಮವಾಗಿ 119, 49, 103 ಕೇಸ್‌ಗಳು ದಾಖಲಾಗಿವೆ.
540ರ ಪೈಕಿ 7 ಪ್ರಕರಣದಲ್ಲಿ ಮಾತ್ರ ಶಿಕ್ಷೆ?
ಶಿವಮೊಗ್ಗ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 201 ಪೋಕ್ಸೋ ಪ್ರಕರಣ ದಾಖಲಾಗಿದ್ದರೆ, 123 ವಿಚಾರಣೆ ಹಂತದಲ್ಲಿವೆ. ವಿಚಿತ್ರವೆಂದರೆ ಒಂದರಲ್ಲೂ ಶಿಕ್ಷೆ ಪ್ರಕಟವಾಗಿಲ್ಲ. ಭದ್ರಾವತಿಯ 119 ಕೇಸ್‌ಗಳಲ್ಲಿ 69 ವಿಚಾರಣೆ ಹಂತದಲ್ಲಿದ್ದು ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಸಾಗರದ 49 ಪ್ರಕರಣಗಳಲ್ಲಿ 33 ವಿಚಾರಣೆ ಹಂತದಲ್ಲಿದ್ದು, 5ರಲ್ಲಿ ಶಿಕ್ಷೆ ಪ್ರಕಟವಾಗಿದೆ. 2026ನೇ ಸಾಲಿನ ಆರು ಪ್ರಕರಣಗಳ ಪೈಕಿ ನಾಲ್ಕರಲ್ಲಿ ಶಿಕ್ಷೆ ಪ್ರಕಟವಾಗಿದೆ. ಉಳಿದಂತೆ ಶಿಕಾರಿಪುರದ 103 ಕೇಸ್‌ಗಳಲ್ಲಿ 62 ವಿಚಾರಣೆ ನಡೆಯುತ್ತಿದೆ. ಎರಡು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ.
ನ್ಯಾಯಾಧೀಶರ ಎದುರು ಹೇಳಿಕೆ ಬದಲು
ಬಹುತೇಕ ಪ್ರಕರಣಗಳು ವಿಚಾರಣೆಯಲ್ಲಿದ್ದು, ಪ್ರಕರಣದ ತೀರ್ಪು ಹೊರಬೀಳುವುದು ತಡವಾಗುತ್ತಿದೆ. ಹಾಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಆದರೆ ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳು ಪ್ರಕರಣದ ಎಫ್‌ಐಆರ್ ದಾಖಲಾಗುವಾಗ ನೀಡಿರುವ ಹೇಳಿಕೆಯನ್ನು ನ್ಯಾಯಾಂಗ(Judiciary)ದ ಮುಂದೆ ಹಾಜರುಪಡಿಸಿದಾಗ ಬದಲಿಸುತ್ತಿದ್ದಾರೆ. ಇದರಿಂದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ತಗ್ಗಿದೆ. ಮಲೆನಾಡಿನ ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗಿದ್ದು, ಎಫ್‌ಐಆರ್(FIR)ನಲ್ಲಿ ದಾಖಲಾದ ಹೇಳಿಕೆಗಳು ನ್ಯಾಯಾಲಯದ ಮುಂದೆ ಬದಲಾಗುತ್ತಿರುವುದು ಶಿಕ್ಷೆ ಪ್ರಮಾಣ ಕುಸಿತಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಅಥವಾ ಪಾಲಕರಿಗೆ ಕಾನೂನು ಅರಿವು ಕಡಿಮೆ. ಹಾಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಉಚಿತ ಕಾನೂನು ಸೇವೆಗಳ ಕೇಂದ್ರವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿದೆ. ಇದು ರಾಜ್ಯದಲ್ಲೇ ಮೊದಲ ಕೇಂದ್ರವಾಗಿದೆ. ಬಹಳಷ್ಟು ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳ ಪರ ಮುಖಂಡರು, ಪಾಲಕರು ಸಂತ್ರಸ್ತರ ಕುಟುಂಬದ ಮೇಲೆ ಒತ್ತಡ ಹಾಕುವುದು. ಆಮಿಷ ಒಡ್ಡುವುದು ಅಥವಾ ರಾಜಿಯಾಗುವ ಸಾಧ್ಯತೆ ಹೆಚ್ಚು. ಆ ಕಾರಣದಿಂದಲೂ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ.
— ತಾಜುದ್ದೀನ್ ಖಾನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ
ಪೋಕ್ಸೋ ಪ್ರಕರಣ ತಡೆಗಟ್ಟಲು ಮಿಷನ್ ಸುರಕ್ಷಾ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ 18 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳ ಅಂಕಿಅಂಶಗಳನ್ನು ಸಂಗ್ರಹಿಸಿದ್ದು, ಶಾಲೆ ಬಿಟ್ಟಿರುವ ಮಕ್ಕಳನ್ನು ಈ ಅಭಿಯಾನದ ಮೂಲಕ ಶಾಲೆಗೆ ಮರಳಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ.
— ಆರ್.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ