ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ರಾಜ್ಯ ಪುಸ್ತಕ ಖರೀದಿ ಸಮಿತಿ ಅಧ್ಯಕ್ಷ ರಾಜಪ್ಪ ದಳವಾಯಿ ಉದ್ಘಾಟಿಸಿದರು. ಚಂದ್ರಶೇಖರ ಕಾಕಾಲ್, ಡಾ. ಜಿ.ಸಣ್ಣಹನುಮಪ್ಪ, ಎಚ್.ಬಿ.ರಾಘವೇಂದ್ರ ಇತರರಿದ್ದರು.
ಸಾಗರ: ಪ್ರಜಾಪ್ರಭುತ್ವ ಎಂದರೆ ಅಭಿಪ್ರಾಯ ರೂಪಿಸುವುದು. ಆದರೆ ಪ್ರಭುತ್ವ ಇದನ್ನು ವ್ಯಕ್ತಪಡಿಸದ ಹಾಗೆ ಕಡಿವಾಣ ಹಾಕುತ್ತಿದೆ. ಇದನ್ನು ದಾಟುವುದು ದೊಡ್ಡ ಸವಾಲು ಎಂದು ರಾಜ್ಯ ಪುಸ್ತಕ ಖರೀದಿ ಸಮಿತಿ ಅಧ್ಯಕ್ಷ, ರಂಗಕರ್ಮಿ ರಾಜಪ್ಪ ದಳವಾಯಿ ಹೇಳಿದರು.
ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್‌ನಿಂದ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿವಿನಲ್ಲಿ ಮಾಧ್ಯಮಕ್ಕೆ ಇರುವ ಸವಾಲು’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಸುದ್ದಿಯ ಜತೆಗೆ ವಿಶ್ಲೇಷಣೆ ಮತ್ತು ಅಭಿಪ್ರಾಯ ರೂಪಿಸಬೇಕು. ಒಂದು ಕಾಲದಲ್ಲಿ ಮಾಧ್ಯಮದವರು ಸಮಾಜ ವಿಜ್ಞಾನಿಗಳಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ ಎಂದರು.
ಪ್ರತಿಯೊಬ್ಬನಿಗೂ ಮಾಹಿತಿ ಹಂಚುವ, ಮಾತನಾಡುವ, ಮುದ್ರಿಸುವ ಮತ್ತು ಅಸಮ್ಮತಿ ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಇಂತಹ ಹಕ್ಕನ್ನು ಇಂದು ಹಲವು ಪ್ರಕಾರಗಳಲ್ಲಿ ಕಸಿಯಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆ ಕುರಿತು ಮಾತನಾಡಿದ ಕಾಕಾಲ್ ೌಂಡೇಶನ್ ಸಂಸ್ಥಾಪಕ ಚಂದ್ರಶೇಖರ ಕಾಕಾಲ್, ಈ ಮೊದಲು ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ಗಾರ್ಬೇಜ್ ಇನ್, ಗಾರ್ಬೇಜ್ ಔಟ್ ಎಂಬ ನಾಣ್ನುಡಿ ಚಾಲ್ತಿಯಲ್ಲಿತ್ತು. ಏಕೆಂದರೆ ಕಂಪ್ಯೂಟರ್ ನಾವು ಮಾಡಿರುವ ಪ್ರೋಗ್ರಾಮ್ ಅನ್ನು ಉಪಯೋಗಿಸಿಕೊಂಡು ನಾವು ಏನನ್ನು ತುರುಕುತ್ತೇವೆಯೋ ಅದನ್ನು ಪ್ರೋಗ್ರಾಂ ಮಾಡಿ ಹೊರಹಾಕುತ್ತದೆ ಅಷ್ಟೇ. ಆದರೆ ಈಗ ಕೃತಕ ಬುದ್ಧಿಮತ್ತೆಯು ಪ್ರಶ್ನೆ ಮತ್ತು ಉತ್ತರ ಎಎರಡನ್ನೂ ನೀಡುತ್ತದೆ. ಎಐ ಕೌಶಲ ಅಳವಡಿಸಿಕೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಡಿಜಿಟಲ್ ಮೀಡಿಯಾ ಪ್ರೆಸ್‌ಕ್ಲಬ್ ಅಧ್ಯಕ್ಷ ಎಚ್.ಬಿ.ರಾಘವೇಂದ್ರ, ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ, ಪ್ರೊ. ಜೆ.ಎಚ್.ಸುರೇಶ್, ಡಾ. ಎ.ಬಿ.ಉಮೇಶ್, ಆಶಿತಾ, ಯಶವಂತ್ ಇತರರಿದ್ದರು.