ಶಿವಮೊಗ್ಗ: ಶ್ರೀ ಗುರು ಬಸವ(GuruBasava) ಮಹಾಸ್ವಾಮಿಗಳವರ 114ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಜನವರಿ 3ರಿಂದ 5ರವರೆಗೆ ಬೆಕ್ಕಿನ ಕಲ್ಮಠ(Bekkina kalmat)ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪುಣ್ಯ ಸ್ಮರಣೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಪುಷ್ಪಾ ಹಾಲಪ್ಪ ಹೇಳಿದರು.
ಗುರುಬಸವ ಅಧ್ಯಯನ ಪೀಠ, ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಶಿವಮೊಗ್ಗ ಬೆಕ್ಕಿನಕಲ್ಮಠದ ಸಹಯೋಗದಲ್ಲಿ ಗುರುಬಸವ ಮಹಾಶಿವಯೋಗಿಗಳವರ ಪುಣ್ಯಸ್ಮರಣೆಯನ್ನು ಪ್ರತಿ ವರ್ಷ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, 114ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಜ.3ರಂದು ಬೆಳಗ್ಗೆ 10.30ಕ್ಕೆ ಕಿರಿಯ ವಿಭಾಗ(10ರಿಂದ 18 ವರ್ಷ), ಹಿರಿಯ ವಿಭಾಗ(18 ವರ್ಷ ಮೇಲ್ಪಟ್ಟು)ದಲ್ಲಿ ವಚನ ಗಾಯನ ಸ್ಪರ್ಧೆ, 10 ವರ್ಷದೊಳಗಿನ ವಚನ ಕಂಠಪಾಠ (ಐದು ಶರಣರ ವಚನಗಳು) ಸ್ಪರ್ಧೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.4ರಂದು ಬೆಳಗ್ಗೆ 10.30ರಿಂದ 18 ವರ್ಷ ಮೇಲ್ಪಟ್ಟವರಿಗೆ ರಂಗೋಲಿ ಸ್ಪರ್ಧೆ, ಜಾನಪದ ಗೀತೆಗಳ ಸಾಮೂಹಿಕ ಗಾಯನ ಸ್ಪರ್ಧೆ ನಡೆಸಲಾಗುತ್ತಿದೆ. 5ರಂದು ಬೆಳಗ್ಗೆ 10.30ರಿಂದ ಜಿಲ್ಲಾಮಟ್ಟದ ಶಿವಾರ್ಪಣಂ ಶಿವ ಭಜನಾ ಸ್ಪರ್ಧೆ ಹಾಗೂ ಗುರು ಬಸವ ಸ್ವಾಮೀಜಿ ಕುರಿತು ಆನ್‌ಲೈನ್ ಪ್ರಶ್ನೋತ್ತರ ಸ್ಪರ್ಧೆ ನಡೆಸಲಾಗುವುದು. ಸಂಜೆ 4ಕ್ಕೆ 5ರಿಂದ 10 ವರ್ಷದೊಳಗಿನ ಮಕ್ಕಳಿಗೆ ಸರ್ವಧರ್ಮ ಮಹಾಪುರ ವೇಷಭೂಷಣ ಸ್ಪರ್ಧೆ ಇರಲಿದೆ ಎಂದರು.
ಮುರುಘಾಮಠದ ಆಯುರ್ವೇದ ಆಸ್ಪತ್ರೆಯ ಡಾ. ನಾಗೇಶ್ ಸುವರ್ಣ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು. ಪುಣ್ಯಸ್ಮರಣೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್.ತಾರಾನಾಥ್, ಉಪ ಸಮಿತಿ ಅಧ್ಯಕ್ಷ ಡಾ. ಸಿ.ರೇಣುಕಾರಾಧ್ಯ, ಶಾಂತಾ ಆನಂದ್, ಸುಮಾ ಹೆಗಡೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.