ಹುಚ್ಚರಾಯಸ್ವಾಮಿ 
ಶಿವಮೊಗ್ಗ

ಹುಚ್ಚರಾಯಸ್ವಾಮಿ ದರ್ಶನಕ್ಕೆ ಭಕ್ತರ ದಂಡು

ಪ್ರಮುಖ ಮುಖ್ಯಾಂಶಗಳು

  • ಹುಚ್ಚರಾಯಸ್ವಾಮಿ ದರ್ಶನಕ್ಕೆ ಭಕ್ತರ ದಂಡು
  • ಪ್ರತಿದಿನಕ್ಕಿಂತಲೂ ಶನಿವಾರ ಮತ್ತಷ್ಟು ಹೆಚ್ಚಳ
  • ಭಕ್ತರನ್ನು ನಿಭಾಯಿಸಲು ತಾಲೂಕು ಆಡಳಿತ ಹರಸಾಹಸ
ಶಿಕಾರಿಪುರ: ಅಧಿಕ ಮಾಸದಲ್ಲಿ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಧಿಕವಾಗಿದೆ. ಪ್ರತಿದಿನ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿದಿನಕ್ಕಿಂತಲೂ ಶನಿವಾರ ಮತ್ತಷ್ಟು ಹೆಚ್ಚಳವಾಗಿರುತ್ತದೆ.
ಅಧಿಕಮಾಸದಲ್ಲಿ ಮೂರು ಹನುಮ ದೇವರುಗಳ ದರ್ಶನ ಮಾಡುವುದು ವಾಡಿಕೆ. ಅಧಿಕ ಮಾಸದಲ್ಲಿ ಹನುಮ ದರ್ಶನದಿಂದ ಅಧಿಕಪುಣ್ಯ ಮತ್ತು ಕಾಶಿ ರಾಮೇಶ್ವರ, ಕೇದಾರ, ಅಯೋಧ್ಯೆ ದರ್ಶನ ಮಾಡಿದಷ್ಟೇ ಪುಣ್ಯ ದೊರಕುವುದೆಂಬ ಪ್ರತಿತಿಯಿದೆ. ಆದ್ದರಿಂದ ಭಕ್ತರು ಅಧಿಕ ಮಾಸದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಬ್ಯಾಡಗಿ ತಾಲೂಕಿನ ಕದರಮಂಡಲಗಿ ಶ್ರೀ ಕಾಂತೇಶ ಸ್ವಾಮಿಯನ್ನು ಮೊದಲು ದರ್ಶನ ಮಾಡಿ, ನಂತರದಲ್ಲಿ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ ಸ್ವಾಮಿಯನ್ನು ದರ್ಶಿಸಿ, ಕಡೆಯಲ್ಲಿ ಶಿಕಾರಿಪುರದ ಭ್ರಾಂತೇಶ ದೇವರನ್ನು ಒಂದೇ ದಿನದಲ್ಲಿ ದರ್ಶನ ಮಾಡುತ್ತಾರೆ.
ಬೆಂಗಳೂರು, ಮೈಸೂರು, ದಾವಣಗೆರೆ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಸೇರಿ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಭಕ್ತರು ಆಗಮಿಸುತ್ತಾರೆ. ಅಧಿಕ ಮಾಸದಲ್ಲಿ ಶ್ರೀ ಹುಚ್ಚರಾಯಸ್ವಾಮಿ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಭಕ್ತರನ್ನು ನಿಭಾಯಿಸಲು ತಾಲೂಕು ಆಡಳಿತ ಹರಸಾಹಸಪಡುತ್ತಿದೆ.
ಪಟ್ಟಣದ ಹಳೇ ಹೊನ್ನಾಳಿ ರಸ್ತೆಯ ಶ್ರೀ ಚನ್ನಮಲ್ಲಿಕಾರ್ಜುನ ದೇವಸ್ಥಾನದವರೆಗೂ ಸುಮಾರು ಒಂದು ಕಿಲೋ ಮೀಟರ್​ವರೆಗೆ ಭಕ್ತರ ಸಾಲಿರುತ್ತದೆ. ಮಂಜಾನೆ 5ರಿಂದ ರಾತ್ರಿ 10.30ರವರೆಗೆ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಅಧಿಕ ಮಾಸದಲ್ಲಿ ಎಂದಿನಂತೆ ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ, ರಾಮರಾ ಪಾರಾಯಣ ಮುಂತಾದ ಸಾಂಪ್ರದಾಯಿಕ ಸೇವೆಗಳನ್ನು ಸಲ್ಲಿಸಲಾಗುತ್ತಿದೆ.
ಕೆಲವು ಪ್ರತಿತಿಗಳ ಪ್ರಕಾರ ಮೂರು ಹನುಮಪ್ಪರನ್ನು ದರ್ಶನ ಮಾಡಿದ ನಂತರ ಶಿಕಾರಿಪುರ ತೇರುಬೀದಿಯಲ್ಲಿರುವ ಕಾಶಿ ವಿಶ್ವೇಶ್ವರನ ದರ್ಶನ ಮಾಡಿದರೆ ಕಾಶಿಗೆ ಹೋದಷ್ಟೇ ಪುಣ್ಯ ದೊರೆಯುತ್ತದೆ.
> ಅಂಜನ್​ ಭಟ್​, ಅರ್ಚಕ