ಆನವಟ್ಟಿ ಸಮೀಪದ ಮೂಗೂರು ಗ್ರಾಮದಲ್ಲಿ ರಾಜ್ಯ ರೈತ ಸಂಘದ ಗ್ರಾಮ ಘಟಕದ ನಾಮಫಲಕವನ್ನು ರೈತ ಮುಖಂಡ ಕೆ.ಟಿ.ಗಂಗಾಧರ್ ಅನಾವರಣಗೊಳಿಸಿದರು. ಈರಪ್ಪ ಪ್ಯಾಟಿ, ಹಾಲೇಶಪ್ಪ ಗೌಡ, ಶಿವಪ್ಪ, ಮಮತಾ, ರತ್ನಾ ಇತರರಿದ್ದರು. 
ಶಿವಮೊಗ್ಗ

ರಾಸಾಯನಿಕ ಬಳಕೆಯಿಂದ ಬೆಳೆಗಳ ಗುಣಮಟ್ಟ ಕುಸಿತ

ಆನವಟ್ಟಿ: ದೇಶಕ್ಕೆ ಅನ್ನ ನೀಡುವ ರೈತ ಇಂದು ಸಂಕಷ್ಟದಲ್ಲಿದ್ದಾನೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ದಾಳಗಳನ್ನಾಗಿ ಮಾಡಿಕೊಂಡಿದ್ದಾರೆ. ರೈತರ ಹಿತಾಸಕ್ತಿಯನ್ನು ಎಲ್ಲ ಪಕ್ಷಗಳು ಕಡೆಗಣಿಸುತ್ತಿವೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.
ಆನವಟ್ಟಿ ಸಮೀಪದ ಮೂಗೂರು ಗ್ರಾಮದಲ್ಲಿ ರಾಜ್ಯ ರೈತ ಸಂಘದ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಸಿರು ಶಾಲನ್ನು ಯಾವುದೇ ಹಿಂಜರಿಕೆಯಿಲ್ಲದೆ ಧರಿಸಬೇಕು. ನಾವೆಲ್ಲರೂ ಒಗ್ಗೂಡಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿಕರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಪರಿಗಣಿಸುತ್ತಿದ್ದಾರೆಯೇ ವಿನಃ ಅವರ ಕಷ್ಟ, ನಷ್ಟಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಕಾರಣಕ್ಕೆ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘಗಳು ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿವೆ. ಹೋರಾಟ ಮಾಡಿ ನಮಗೆ ಸಿಗಬೇಕಾದ ಬೆಲೆಗಳನ್ನು ಕೇಳಿ ಪಡೆಯಬೇಕಿದೆ. ಅದಕ್ಕಾಗಿ ಇಂದು ಯುವ ರೈತರು ರಾಜ್ಯ ರೈತ ಸಂಘದ ಜತೆಗೂಡಿ ಹೋರಾಡುವ ಅವಶ್ಯವಿದೆ ಎಂದು ತಿಳಿಸಿದರು.
ದೇಶದಲ್ಲಿ ಈ ಹಿಂದೆ ಆಹಾರದ ಕೊರತೆ ಉಂಟಾದಾಗ ಸರ್ಕಾರ ಹಸಿರು ಕ್ರಾಂತಿ ಕಾರ್ಯಕ್ರಮ ತಂದು ರೈತರು ಅತಿ ಹೆಚ್ಚು ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿತು. ಆದರೆ ಇಂದು ಹೆಚ್ಚು ಇಳುವರಿ ತೆಗೆಯುವ ಭರದಲ್ಲಿ ಅಧಿಕ ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಬೆಳೆಗಳ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಬೆಳೆಗಳಿಗೆ ಬೆಲೆಯೂ ಸಿಗದಂತಾಗಿದೆ. ಆದ್ದರಿಂದ ರೈತರು ಹೆಚ್ಚು ಬೆಳೆ ಬೆಳೆಯುವುದಕ್ಕಿಂತ ಗುಣಮಟ್ಟದ ಬೆಳೆ ಬೆಳೆಯುವುದು ಅನಿವಾರ್ಯವಾಗಿದೆ ಎಂದರು. 
ವಕೀಲ ಶಿವಪ್ಪ ಮಾತನಾಡಿ, ರಾಜ್ಯದಲ್ಲಿ ರೈತ ಸಂಘ ಸ್ಥಾಪನೆಗೊಂಡು 50 ವರ್ಷ ಕಳೆದಿವೆ. ಆದರೂ ಕೆಲ ಹಳ್ಳಿಗಳಲ್ಲಿ ರೈತರು ಸಂಘದ ಸ್ಥಾಪನೆ ಮಾಡಿಲ್ಲ. ಎಲ್ಲ ರೈತರು ಸಂಘದಲ್ಲಿ ಸೇರಿಕೊಂಡು ಒಗ್ಗೂಡಬೇಕಿದೆ. ನಮಗೆ ಆಗುವ ಅನ್ಯಾಯದ ವಿರುದ್ಧ ಹೋರಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಈರಪ್ಪ ಪ್ಯಾಟಿ, ಜಿಲ್ಲಾಧ್ಯಕ್ಷ ಕೆ.ಎನ್.ಹಾಲೇಶಪ್ಪ ಗೌಡ, ಪ್ರಮುಖರಾದ ದೇವರಾಜ ಕಲ್ಲಣ್ಣನವರ್, ಯಶವಂತ ರಾವ್ ಘೋರ್ಪಡೆ, ಚಂದ್ರಶೇಖರ್ ಬಾಪಟ್, ಗ್ರಾಮಸ್ಥರಾದ ಶಿವಾನಂದಪ್ಪ, ಹರೀಶ್, ಶಿವಪ್ಪ, ಸೋಮು, ಮಮತಾ, ರತ್ನಾ, ನೇತ್ರಾ ಇತರರಿದ್ದರು.