ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ಶಿವಮೊಗ್ಗ ಜಿಲ್ಲೆಯ ಸಾಧಕ ವಿದ್ಯಾರ್ಥಿಗಳನ್ನು ಮಧು ಬಂಗಾರಪ್ಪ ಸನ್ಮಾನಿಸಿದರು. ಬಲ್ಕಿಶ್‌ಬಾನು, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಮಂಜುನಾಥ ಸ್ವಾಮಿ ಇತರರಿದ್ದರು. 
ಶಿವಮೊಗ್ಗ

ಫಲಿತಾಂಶ ಟೀಕಿಸುವುದು ಮಕ್ಕಳಿಗೆ ಅವಮಾನಿಸಿದಂತೆ I student result

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಕ್ಷೇತ್ರದ ಬದಲಾವಣೆಗಳ ಬಗ್ಗೆ ಮೊದಲು ಅರಿಯಿರಿ
  • ನಾವೇ ಮೊದಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತಂದದ್ದು
  • ಸಚಿವ ಮಧು ಬಂಗಾರಪ್ಪ ಹೇಳಿಕೆ
ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ (sslc) ಫಲಿತಾಂಶದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದರೂ ಅದನ್ನು ಟೀಕಿಸುವ ಮೂಲಕ ಕೆಲವರು ಮಕ್ಕಳಿಗೆ ಅವಮಾನ ಮಾಡುತ್ತಿದ್ದಾರೆ. ಸಾಧಕ ವಿದ್ಯಾರ್ಥಿಗಳ (students) ಶಾಪ ಅವರಿಗೆ ತಟ್ಟಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ (minister) ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮನ್ನು ಕಟುವಾಗಿ ಟೀಕಿಸಿದ ಮಾಜಿ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಹಾಗೂ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ವಿರುದ್ಧ ಟೀಕಾಪ್ರಹಾರ ನಡೆಸಿದ ಮಧು ಬಂಗಾರಪ್ಪ, ವಿಶ್ವನಾಥ್ ಅವರಿಗೆ ವಯಸ್ಸಾಗಿದೆ. ಬೊಮ್ಮಾಯಿ ಅವರಿಗೂ ಅದೇ ಮಾತು ಅನ್ವಯಿಸಬಹುದು ಎಂದು ವ್ಯಂಗ್ಯವಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಉತ್ತೀರ್ಣಕ್ಕೆ ಕನಿಷ್ಠ ಅಂಕ 33ಕ್ಕೆ ಇಳಿಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನ್ನನ್ನು ಟೀಕಿಸುವ ಭರದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು, ಅವರ ಪಾಲಕರು ಹಾಗೂ ಶಿಕ್ಷಕರನ್ನು ಅವಮಾನಿಸುವ ಕೆಲಸವಾಗಿದೆ ಎಂದು ದೂರಿದರು.
ದೇಶದಲ್ಲಿ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದು ನಾನು. ಶಾಲೆಗಳಲ್ಲಿ ನಿರಂತರವಾಗಿ ಪಾಲಕರ ಸಭೆ ನಡೆಯುಯವಂತೆ ನೋಡಿಕೊಂಡಿದ್ದೇನೆ. ಶಾಲೆಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗಿವೆ. ನನ್ನನ್ನು ಟೀಕಿಸುವವರು ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು. ದೇಶದ ಬಹುತೇಕ ರಾಜ್ಯಗಳು ಉತ್ತೀರ್ಣದ ಕನಿಷ್ಠ ಅಂಕವನ್ನು 33ಕ್ಕೆ ಇಳಿಸಿವೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ನೆಪ ಮಾಡಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ. ಕಲಬುರಗಿ ಜಿಲ್ಲೆ ನಿಜವಾಗಿ ಸಾಧನೆ ಮಾಡಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾರ್ಥಿಗಳ ಸಾಧನೆ ಕಂಡು ಬಿಜೆಪಿಯವರಿಗೆ ಹೊಟ್ಟೆಕಿಚ್ಚು ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭ

ಒಳಮೀಸಲಾತಿ ನನೆಗುದಿಗೆ ಬಿದ್ದಿದ್ದ ಕಾರಣ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಮಸ್ಯೆಯಾಗಿತ್ತು. ಈಗ ನಮ್ಮ ಸರ್ಕಾರ ಒಳಮೀಸಲಾತಿ ಹಂಚಿಕೆಯನ್ನು ಯಶಸ್ವಿಯಾಗಿ ಪೂರೈಸಿದೆ. ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5,800 ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.