ಶಿರಾಳಕೊಪ್ಪ: ಕುಟುಂಬಗಳನ್ನು ಸಾಲದ ಸುಳಿಗೆ ಸಿಲುಕಿಸುವ ಬೀಗರೂಟ ಪದ್ಧತಿಯನ್ನು ರದ್ದುಪಡಿಸಿರುವ ಹರಗಿ ಗ್ರಾಮಸ್ಥರ ನಿರ್ಧಾರ ಮಾದರಿ. ಇದು ಮತ್ತಷ್ಟು ಗಟ್ಟಿಯಾಗಿರಲಿ ಎಂದು ಕರ್ನಾಟಕ ದೀವರು ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ಅಧ್ಯಕ್ಷ ವೈ.ಜಿ.ಪುಟ್ಟಸ್ವಾಮಿ ಹೇಳಿದರು.
ಹರಗಿ ಗ್ರಾಮದಲ್ಲಿ ಬೀಗರೂಟ ರದ್ದುಪಡಿಸಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ದೀವರು ಸಾಂಸ್ಕೃತಿಕ ಅಧ್ಯಯನ ಸಂಸ್ಥೆಯಿಂದ ಗ್ರಾಮಸ್ಥರನ್ನು ಅಭಿನಂದಿಸಿ ಮಾತನಾಡಿದ ಅವರು, ಹರಗಿ ಗ್ರಾಮದ ಕಲ್ಲಪ್ಪ ಶಾಸ್ತ್ರಿಗಳಿಂದಲೇ ದೀವರ ಗುರು ಪರಂಪರೆ ಆರಂಭವಾಗಿದೆ. ಇಂತಹ ಐತಿಹಾಸಿಕ ಹಿನ್ನೆಲೆಯ ಗ್ರಾಮದಲ್ಲಿ ಗ್ರಾಮಸ್ಥರು ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ದೀವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೀವರ ಸಂಸ್ಕೃತಿ ವಿಶಿಷ್ಟತೆ ಹೊಂದಿದೆ. ಗೆಜೆಟ್‌ನಲ್ಲಿ ದೀವರು ಎಂಬ ಹೆಸರಿದ್ದು, ಜಾತಿ ಕಾಲಂನಲ್ಲಿ ಧೈರ್ಯವಾಗಿ ದೀವರು ಎಂದು ನಮೂದಿಸಬೇಕು. ಸಂಸ್ಥೆಯಿಂದ ಜಿಲ್ಲಾದ್ಯಂತ ದೀವರು ಕುಟುಂಬಗಳು ವಾಸಿಸುವ ಗ್ರಾಮಗಳಿಗೆ ತೆರಳಿ ಬೀಗರೂಟ ಪದ್ಧತಿ ನಿಲ್ಲಿಸುವ ಕುರಿತು ಜಾಗೃತಿ ಮೂಡಿಸಲಾಗುವುದು. ಇದಕ್ಕೆ ಸಮಾಜದವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹರಗಿ ಗ್ರಾಮ ಸಮಿತಿ ಅಧ್ಯಕ್ಷ ಶೇಖರಾಜ್ ಮಾತನಾಡಿ, ಹಿಂದುಳಿದ ವರ್ಗದವರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಶಿಕ್ಷಣ ಮತ್ತು ಉದ್ಯೋಗದ ಮೂಲಕ ಪ್ರಗತಿಯತ್ತ ಸಾಗಬೇಕು. ನಮ್ಮ ಗ್ರಾಮದ ನಿರ್ಧಾರ ಎಲ್ಲ ತಾಲೂಕುಗಳಿಗೂ ವಿಸ್ತರಿಸಬೇಕು ಎಂದರು.
ಗ್ರಾಮ ಸಮಿತಿ ಕಾರ್ಯದರ್ಶಿ ಗುರುಮೂರ್ತಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಸಂಸ್ಥೆ ತಾಲೂಕು ಅಧ್ಯಕ್ಷ ಒ.ಬಿ.ರಾಜಶೇಖರ್, ಗೌರವಾಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಎಂ.ಡಿ.ಉಮೇಶ್, ಪ್ರಧಾನ ಕಾರ್ಯದರ್ಶಿ ನಾಗೇಶ್, ಖಜಾಂಚಿ ರವಿಕುಮಾರ್, ಮುಖಂಡರಾದ ಗಣಪತಿ, ತ್ಯಾಗರಾಜ್ ಇತರರಿದ್ದರು.