ಶಿಕಾರಿಪುರದಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡುತ್ತಿರುವುದು.
ಶಿಕಾರಿಪುರ: ಇಂದು ವಿಶ್ವದಾದ್ಯಂತ ಪಸರಿಸಿರುವ ಯೋಗ ಭಾರತದ ಕೊಡುಗೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ ಹೇಳಿದರು.
ಪಟ್ಟಣದ ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆರೋಗ್ಯ ವೃದ್ಧಿಗೆ ಪೂರಕವಾದ ಈ ವಿದ್ಯೆಯನ್ನು ಜಗತ್ತೇ ಅಪ್ಪಿಕೊಂಡಿದೆ. ನಮ್ಮ ಮಕ್ಕಳಿಗೆ ನಾವು ಬಾಲ್ಯದಿಂದಲೇ ಯೋಗದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಗೀತಾ ಚೆನ್ನಯ್ಯ ಮಾತನಾಡಿ, ಸ್ವಸ್ಥ ಭಾರತ ನಿರ್ಮಾಣಕ್ಕಾಗಿ ನಾವು ಯೋಗಾಭ್ಯಾಸ ಮಾಡಬೇಕು. ಯೋಗಾಭ್ಯಾಸ ನಮ್ಮನ್ನು ಸದಾ ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಇದರಿಂದ ಮನಸಿನ ಕಲ್ಮಶಗಳು ದೂರವಾಗಿ ಮನಸ್ಸು ಪರಿಶುದ್ಧವಾಗುತ್ತದೆ. ಸಂಯಮ ಮತ್ತು ಶಾಂತಿ ಲಭಿಸುತ್ತದೆ. ಆರೋಗ್ಯವೇ ಎಲ್ಲಕ್ಕಿಂತ ದೊಡ್ಡದಾದ ಸಂಪತ್ತು ಎಂದು ಅಭಿಪ್ರಾಯಪಟ್ಟರು. ಪ್ರಾಚಾರ್ಯ ಸುರೇಶ್, ಉಪಪ್ರಾಚಾರ್ಯೆ ಗೀತಾ ಬಣಕಾರ್, ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.