ವಿದ್ಯುತ್ ಖಾಸಗೀಕರಣ ವಿರೋಧಿಸಿ ತೀರ್ಥಹಳ್ಳಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಸ್.ರಂಜಿತ್ ಅವರಿಗೆ ಮನವಿ ಸಲ್ಲಿಸಿದರು. ಶಾಸಕ ಆರಗ ಜ್ಞಾನೇಂದ್ರ, ರಾಜೇಂದ್ರ, ವೆಂಕಟೇಶ ಹೆಗ್ಡೆ, ಕೋಡ್ಲು ವೆಂಕಟೇಶ್, ರಾಮಕೃಷ್ಣ ಇತರರಿದ್ದರು. 
ಶಿವಮೊಗ್ಗ

ಭ್ರಷ್ಟಾಚಾರದಿಂದ ವಿದ್ಯುತ್ ಇಲಾಖೆಗೆ ನಷ್ಟ | Electricity Privatization

ತೀರ್ಥಹಳ್ಳಿ: ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜನರ ಬದುಕಿನಲ್ಲಿ ಪ್ರಮುಖವಾಗಿರುವ ವಿದ್ಯುತ್ ಪೂರೈಸುವ ಹೊಣೆಗಾರಿಕೆ ಸರ್ಕಾರದ್ದು. ಆದರೆ ಖಾಸಗಿಯವರಿಗೆ ವಹಿಸುವ ನಿರ್ಧಾರ ಖಂಡನೀಯ. ವಿದ್ಯುತ್ ವಿತರಣೆಯಲ್ಲಿ ರಾಜ್ಯದಲ್ಲಿರುವ ಇತರೆ ವಿಭಾಗಗಳಿಗಿಂತ ಮೆಸ್ಕಾಂ ಮತ್ತು ಲೈನ್‌ಮನ್‌ಗಳ ಕಾರ್ಯ ಉತ್ತಮವಾಗಿದೆ. ಇಲಾಖೆಗೆ ನಷ್ಟವಾಗದಂತೆ ಉತ್ತಮ ಸಲಕರಣೆ ಒದಗಿಸುವುದು ಮುಖ್ಯ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಆಗಿರುವ ಖಾಸಗೀಕರಣದಿಂದ ಗೊಂದಲವಾಗಿ ಅದನ್ನು ಕೈಬಿಡುವ ಹಂತ ತಲುಪಿದೆ. ಲಾಭದ ದೃಷ್ಟಿಯಿಂದ ಟಾಟಾ ಕಂಪನಿಯು ಮೆಸ್ಕಾಂ ವಿಭಾಗಕ್ಕೆ ಟೆಂಡರ್ ಹಾಕಿದೆ. ಕಂಪನಿಯ ನಿರ್ವಹಣೆ ಉತ್ತಮವಾಗಿಲ್ಲ ಎಂಬ ಆರೋಪವಿದೆ. ಜತೆಗೆ ವಿದ್ಯುತ್ ವ್ಯವಸ್ಥೆಯಲ್ಲಿ ನಷ್ಟವಾಗುವುದಕ್ಕೆ ಮೆಲ್ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿದರು.
ರೈತರಿಗೆ ದೊರೆಯುತ್ತಿರುವ ಸವಲತ್ತು ಕಡಿತಗೊಳಿಸುವ ಮೂಲಕ ರೈತರ ಭೂಮಿ ಕಸಿಯುವ ಹುನ್ನಾರದ ಭಾಗವಿದು. ವಿದ್ಯುತ್ ಖಾಸಗೀಕರಣ ನಿರ್ಧಾರ ರೈತರು, ಜನ ಸಾಮಾನ್ಯರಿಗೆ ಹೊರೆಯಾಗಲಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಹಾಗೂ ಆಕ್ಷೇಪಣೆ ಸಲ್ಲಿಕೆ ದಿನಾಂಕವನ್ನು ಮುಂದೂಡಬೇಕು. ಜನರಿಗೆ ಸವಲತ್ತು ಒದಗಿಸಲು ಲಾಭ-ನಷ್ಟದ ವಿಚಾರವೇ ಇರಬಾರದು. ಜನಪ್ರತಿನಿಧಗಳಿಗೆ ಮತ್ತು ಅಧಿಕಾರಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಐಷಾರಾಮಿ ವ್ಯವಸ್ಥೆ ದೊರೆಯುತ್ತಿದೆ. ಇದರಲ್ಲಿ ಏಕೆ ನಷ್ಟದ ವಿಷಯ ಪ್ರಸ್ತಾಪವಾಗುವುದಿಲ್ಲ ಎಂದು ರೈತ ಮುಖಂಡ ಕಂಬ್ಳಿಗೆರೆ ರಾಜೇಂದ್ರ ಪ್ರಶ್ನಿಸಿದರು.
ಕರವೇ ಮುಖಂಡ ವೆಂಕಟೇಶ ಹೆಗ್ಡೆ ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಿದರೆ ಮೊಬೈಲ್‌ಗೆ ಕರೆನ್ಸಿ ಹಾಕುವ ಮಾದರಿಯಲ್ಲಿ ವಿದ್ಯುತ್ ಶುಲ್ಕ ತುಂಬುವ ವ್ಯವಸ್ಥೆ ಬರುವ ಸಾಧ್ಯತೆ ಇದೆ ಎಂದರು.
ಇದಕ್ಕೆ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಟ್ರ್ಯಾಕ್ಟರ್‌ನೊಂದಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಾಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ರಾಮಕೃಷ್ಣ, ನಾಗರಾಜ್, ಧರ್ಮೇಶ್, ಪೂರ್ಣೇಶ್, ವಿಷ್ಣು, ಅನಿಲ್, ರಾಮಾನಾಯ್ಕ ಇತರರಿದ್ದರು.