ಸಾಗರದಲ್ಲಿ ಆಯೋಜಿಸಿದ್ದ ಸಾಹಿತ್ಯದ ಭಾಷೆ ಉಪನ್ಯಾಸ ಕಾರ್ಯಕ್ರಮಕ್ಕೆ ಸಾಹಿತಿ ಲಕ್ಷ್ಮಣ್ ಕೊಡಸೆ ಚಾಲನೆ ನೀಡಿದರು. ಡಾ. ಜಿ.ಎಸ್.ಭಟ್, ಡಾ. ರ್ಸ್ರಾಜ್ ಚಂದ್ರಗುತ್ತಿ, ಕೆ.ಸಿ.ಸತ್ಯನಾರಾಯಣ ಮುಂತಾದವರಿದ್ದರು. 
ಶಿವಮೊಗ್ಗ

ಸಾಹಿತ್ಯದ ಮೇಲೆ ನಿಯಂತ್ರಣ ಕಳವಳಕಾರಿ

ಟಿ.ಎಚ್.ಸಂತೋಷ್ ಕುಮಾರ್
ಸಾಗರ: ವರ್ತಮಾನದಲ್ಲಿ ಜನರಾಡುವ ಭಾಷೆಯಂತೆಯೇ ಸಾಹಿತ್ಯದ ಭಾಷೆ ಕುರಿತು ಮಾತನಾಡುವಾಗಲೂ ಆತಂಕಪಡುವ ಸ್ಥಿತಿಯಲ್ಲಿ ನಾವಿದ್ದೇವೆ. ಸಾಂದರ್ಭಿಕವಾಗಿ ಬಳಸುವ ಭಾಷೆ ಮೇಲೆ
ನಿಯಂತ್ರಣ ಹೇರುವ ಪ್ರವೃತ್ತಿಯಿಂದಾಗಿ ಸಾಹಿತ್ಯದ ಭಾಷೆ ನಲುಗುತ್ತಿದೆ ಎಂದು ಸಾಹಿತಿ ಡಾ. ಜಿ.ಎಸ್.ಭಟ್ ಹೇಳಿದರು.
ಪುಸ್ತಕ ಪ್ರಾಧಿಕಾರ ಬೆಂಗಳೂರು, ಸರ್ಕಾರಿ ಪಿಯು ಕಾಲೇಜು ಹಾಗೂ ಪರಸ್ಪರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತ್ಯದ ಭಾಷೆ ಎಂಬ ವಿಷಯ ಕುರಿತು ಉಪನ್ಯಾಸ
ನೀಡಿದರು.
ಸಾಹಿತ್ಯದ ಭಾಷೆ ಮೇಲೆ ವ್ಯವಸ್ಥೆ ನಿಯಂತ್ರಣ ಹೇರುವ ಪ್ರವತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಲೇಖಕ ತನ್ನ ಅಭಿವ್ಯಕ್ತಿಯನ್ನು ಸಮರ್ಥವಾಗಿ ನಿರೂಪಿಸಲು ಸಾಧ್ಯವಾಗುವುದಿಲ್ಲ.
ಆಡು ಭಾಷೆ ಸಾಹಿತ್ಯದ ಭಾಗವಾಗಿ ಪರಿವರ್ತನೆಯಾಗುವ ವಿಸ್ಮಯವನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗ್ರಹಿಸಬೇಕು. ವ್ಯಕ್ತಿನಿಷ್ಠೆ ಭಾವನೆಗಳನ್ನು ಕೃತಿಯಲ್ಲಿ ತಲೆದೋರದಂತೆ ಎಚ್ಚರವಹಿಸುವುದು
ಲೇಖಕನ ಮುಂದಿರುವ ಸವಾಲು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಸದಸ್ಯ ಲಕ್ಷ್ಮಣ್ ಕೊಡಸೆ, ಸೆಮಿಸ್ಟರ್ ಪೂರ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಾಮಾಜಿಕ, ರಾಜಕೀಯ
ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬೆಳೆದಿದ್ದಾರೆ. ಆದರೆ ಇಂದಿನ ಪರೀಕ್ಷಾ ಕೇಂದ್ರಿತ ಶಿಕ್ಷಣ ಕ್ರಮದಿಂದಾಗಿ ವಿದ್ಯಾರ್ಥಿಗಳು ಸಾಮಾಜಿಕ, ಸಾಹಿತ್ಯಿಕ ಸಾಮರಸ್ಯ ಸಾಧಿಸಲಾರದೆ ಸೋಲು
ಅನುಭವಿಸುವುದನ್ನು ನಾವೆಲ್ಲ ಅಸಹಾಯಕರಾಗಿ ನೋಡುವಂತಾಗಿದೆ ಎಂದರು.
ನಾನು ಮೆಚ್ಚಿದ ಪುಸ್ತಕ ವಿಷಯ ಕುರಿತು ಎಸ್.ಕವನಾ ಮಾತನಾಡಿದರು. ಪರಸ್ಪರ ಸಾಹಿತ್ಯ ವೇದಿಕೆಯ ಡಾ. ರ್ಸ್ರಾಜ್ ಚಂದ್ರಗುತ್ತಿ, ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ, ಡಾ. ಕೆ.ಎಸ್.ದೇವೇಂದ್ರ,
ಕನ್ನಡ ಉಪನ್ಯಾಸಕ ಹರೀಶ್ ಇತರರಿದ್ದರು. ಕನ್ನಡ ಭಾಷೆ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.