ಸೊರಬದ ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಕನ್ನಡ ಭವನ ಉದ್ಘಾಟನೆ, 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಗಣಪತಿ ಹುಲ್ತಿಕೊಪ್ಪ, ಷಣ್ಮುಖಾಚಾರ್, ರಾಜಪ್ಪ ಮಾಸ್ತರ್ ಇತರರಿದ್ದರು.
- ಕಸಾಪ ತಾಲೂಕು ಕಾರ್ಯಾಧ್ಯಕ್ಷ ಗಣಪತಿ ಹುಲ್ತಿಕೊಪ್ಪ ಅಭಿಮತ
- ಏ.6ಕ್ಕೆ ಭವನ ಉದ್ಘಾಟನೆ, ಸಮ್ಮೇಳನ ಆಯೋಜನೆ
ಸೊರಬ: ಕನ್ನಡ ಸಾಹಿತ್ಯ, ಸಂಸ್ಕೃತಿ ಪರಂಪರೆಗೆ ಸೊರಬ ತಾಲೂಕು ಅಪಾರ ಕೊಡುಗೆ ನೀಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಾರ್ಯಾಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ ಹೇಳಿದರು.
ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏ.6ರಂದು ನೂತನ ಕನ್ನಡ ಭವನ ಉದ್ಘಾಟನೆ ಮತ್ತು ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜ್ಯದಲ್ಲೇ ಅತಿ ದೊಡ್ಡ ನಿವೇಶನ ಕನ್ನಡ ಸಾಹಿತ್ಯ ಪರಿಷತ್‌ಗೆ ದೊರೆತಿದೆ. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲು ಕಾರಣಕರ್ತರು. ಸೂರ್ಯನಾರಾಯಣ ಹೆಗಡೆ ಮತ್ತು ಕುಮ್ಮೂರು ರಂಗಪ್ಪ ವೇದಿಕೆಯಲ್ಲಿ ತಹಸೀಲ್ದಾರ್ ಪುರಂದರ ಅವರು ರಾಷ್ಟ್ರಧ್ವಜ, ನಾಡಧ್ವಜವನ್ನು ತಾಪಂ ಇಒ ಶಶಿಧರ ಹಾಗೂ ಪರಿಷತ್ ಧ್ವಜವನ್ನು ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್ ನೇರವೇರಿಸುವರು ಎಂದರು.
ಅಧ್ಯಕ್ಷರ ಮೆರವಣಿಗೆ: ಕನ್ನಡ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ರಂಗನಾಥ ಸ್ವಾಮಿ ದೇವಾಲಯದ ಆವರಣದಿಂದ ನೂತನ ಕಟ್ಟಡದವರಗೆ ವಿವಿಧ ವಾದ್ಯಮೇಳ, ಜಾನಪದ ಕಲಾ ತಂಡಗಳೊಂದಿಗೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಮ್ಮೇಳನದ ಸರ್ವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಭಾಷಣ ಮಾಡುವರು. ನಾಲ್ಕು ವಿಚಾರಗೋಷ್ಠಿ ನಡೆಯಲಿವೆ. ಹಾಡು ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಗಣಪತಿ ಹುಲ್ತಿಕೊಪ್ಪ ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಚಾರ್ ಮಾತನಾಡಿ, ಸಚಿವ ಮಧು ಬಂಗಾರಪ್ಪ ಅವರು ಕಸಾಪ ಧ್ವಜಾರೋಹಣ ಹಾಗೂ ಭವನ ಉದ್ಘಾಟನೆ, ಪುಸ್ತಕ ಮಳಿಗೆಗಳನ್ನು ಉದ್ಘಾಟಿಸುವರು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಟಿ.ರಾಜಪ್ಪ ಮಾಸ್ತರ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಕನ್ನಡ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್, ರೇವಣಪ್ಪ, ಪರಶುರಾಮ್, ಶಿವಾನಂದ, ಮಧುರಾಯ್ ಜಿ. ಶೇಟ್, ರೇಣುಕಮ್ಮ ಗೌಳಿ ಇತರರಿದ್ದರು.