ಮಲೆನಾಡು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಉಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಅಧ್ಯಕ್ಷ ಜಿ.ಎಂ.ಜಗದೀಶ್, ಪದಾಧಿಕಾರಿಗಳಾದ ದೇವರಾಜ್, ಸಂತೋಷ್ ಇದ್ದರು. 
ಶಿವಮೊಗ್ಗ

1,800 ಕೋಟಿ ರೂ. ಬಾಕಿ ಬಿಡುಗಡೆಗೆ ಗುತ್ತಿಗೆದಾರರ ಒತ್ತಾಯ Contractors' Association

ಜಿಲ್ಲೆಯಲ್ಲಿ 2022-23ರಿಂದ ಇಲ್ಲಿಯವರೆಗೂ ವಿವಿಧ ಇಲಾಖೆಗಳ ಅಡಿ ನಡೆದ ಕಾಮಗಾರಿಗಳಿಂದ ಬಾಕಿ ಇರುವ 1,800 ಕೋಟಿ ರೂ. ಅನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಮಲೆನಾಡು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಉಮೇಶ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ 2022-23ರಿಂದ ಇಲ್ಲಿಯವರೆಗೂ ವಿವಿಧ ಇಲಾಖೆಗಳ ಅಡಿ ನಡೆದ ಕಾಮಗಾರಿಗಳಿಂದ ಬಾಕಿ ಇರುವ 1,800 ಕೋಟಿ ರೂ. ಅನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಮಲೆನಾಡು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಉಮೇಶ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕಾಮಗಾರಿ ಪೂರ್ಣಗೊಳಿಸಿ ಬಿಲ್ ಸಲ್ಲಿಸಿದ್ದರೂ ಪಾವತಿ ವಿಳಂಬವಾಗುತ್ತಿದೆ. ಕಾರ್ಮಿಕರಿಗೆ ವೇತನ ನೀಡುವುದು, ಕಾಮಗಾರಿಗೆ ಅಗತ್ಯ ಸಾಮಗ್ರಿ ಖರೀದಿ ಹಾಗೂ ಬ್ಯಾಂಕ್ ಸಾಲ ಮರುಪಾವತಿ ಕಷ್ಟವಾಗಿದೆ. ದಸರಾ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಬೇಕಿದೆ. ಹಾಗಾಗಿ ಬಾಕಿ ಬಿಲ್‌ಗಳನ್ನು ಒಂದೆರಡು ದಿನಗಳಲ್ಲಿ ಪಾವತಿಸುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮದಲ್ಲಿ ಬಿಲ್‌ಗಳು ಪಾವತಿಗೆ ಶಿಫಾರಸ್ಸು ಆಗುವ ಮೊದಲು 30-35 ಹಂತಗಳನ್ನು ದಾಟಬೇಕಿದೆ. ಇದರಿಂದ ಪಾವತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಅನುಸರಿಸುತ್ತಿರುವಂತೆ ಸರಳ, ಪಾರದರ್ಶಕ ಹಾಗೂ ತ್ವರಿತ ಪಾವತಿ ವ್ಯವಸ್ಥೆಯನ್ನು ನೀರಾವರಿ ನಿಗಮದಲ್ಲೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಮಗಾರಿ ಪೂರ್ಣಗೊಂಡ ಬಳಿಕ ಅಳತೆ ಪುಸ್ತಕ ಸಿದ್ಧಪಡಿಸುವುದು, ಬಿಲ್ ಪರಿಶೀಲನೆ ಸೇರಿ ಅಗತ್ಯ ದಾಖಲೆಗಳ ಪ್ರಕ್ರಿಯೆ ತ್ವರಿತಗೊಳಿಸಬೇಕು. ಬಿಲ್‌ಗಳನ್ನು ನಿಗದಿತ ಕಾಲಮಿತಿಯಲ್ಲಿ ಪಾವತಿಸಬೇಕು. ಅನುದಾನದ ಲಭ್ಯತೆ ಖಚಿತಪಡಿಸಿಕೊಳ್ಳದೆ ಟೆಂಡರ್ ಆಹ್ವಾನಿಸುವುದರಿಂದ ಗುತ್ತಿಗೆದಾರರು ಸಾಲ ಮಾಡಿ ಕಾಮಗಾರಿ ನಿರ್ವಹಿಸಬೇಕಾಗುತ್ತದೆ. ಹೀಗಾಗಿ, ಅನುದಾನ ಖಚಿತವಾದ ಬಳಿಕವೇ ಟೆಂಡರ್ ಕರೆಯಬೇಕು. ಪ್ಯಾಕೇಜ್ ಟೆಂಡರ್‌ಗಳ ಬದಲು ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಅವಕಾಶ ದೊರೆಯುವುದರ ಜತೆಗೆ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಜಿ.ಎಂ.ಜಗದೀಶ್ ಮಾತನಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬಿಲ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಪಾವತಿ ವಿಳಂಬ ಮಾಡುವ ಅಧಿಕಾರಿಗಳ ಹೊಣೆಗಾರಿಕೆ ನಿಗದಿಪಡಿಸಬೇಕು. ಅನ್ವಯಿಸುವ ಕಾನೂನು ಮತ್ತು ನಿಯಮಗಳ ಪ್ರಕಾರ ವಿಳಂಬ ಪಾವತಿಗೆ ಬಡ್ಡಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಈ ಮೂಲಕ ಗುತ್ತಿಗೆದಾರರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಗುತ್ತಿಗೆದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅನುದಾನ ಬಿಡುಗಡೆಯಾಗಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಪಾವತಿಸುವ ಮೂಲಕ ಗುತ್ತಿಗೆದಾರರು ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಲು ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳಾದ ದೇವರಾಜ್, ಸಂತೋಷ್, ಚಂದ್ರು ಇದ್ದರು.

ನೀರಾವರಿ ನಿಗಮದಲ್ಲಿ ಗುತ್ತಿಗೆದಾರರು ಠೇವಣಿ ಇಟ್ಟಿರುವ ಇಎಂಡಿ ಮತ್ತು ಎಫ್‌ಎಸ್‌ಡಿ ಹಣ 5-6 ವರ್ಷಗಳಿಂದ ಬಾಕಿ ಉಳಿದಿದೆ. ಅದನ್ನು ಇತರ ಗುತ್ತಿಗೆದಾರರ ಬಿಲ್ ಪಾವತಿಗೆ ಬಳಸಲಾಗಿದೆ ಎಂಬ ಆರೋಪದ ಕುರಿತು ಪರಿಶೀಲಿಸಬೇಕು. ನಿಯಮಾನುಸಾರ ಗುತ್ತಿಗೆದಾರರಿಗೆ ಠೇವಣಿ ಹಣ ಹಿಂದಿರುಗಿಸಬೇಕು.
ಎಚ್.ಸಿ.ಉಮೇಶ್, ಮಲೆನಾಡು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ