ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ
- ಹಣ ಪಾವತಿಸಿದರೂ ಕ್ರಯಪತ್ರ ಮಾಡಿಕೊಡದೇ ಸೇವಾನ್ಯೂನತೆ
- ವಿನೋಬನಗರದ ವೆಂಕಟಲಕ್ಷ್ಮೀ ಎಂಬುವರು ದೂರುದಾರರು
- ನೆಲಮಂಗಲ ತಾಲೂಕು ಯಲಚಗೆರೆಯಲ್ಲಿ 5 ಲಕ್ಷ ರೂ.ಗೆ ಖರೀದಿಸಿದ್ದ ನಿವೇಶನ
ಶಿವಮೊಗ್ಗ: ನಿವೇಶನ ಖರೀದಿಗೆ ಹಣ ಪಾವತಿಸಿದರೂ ಕ್ರಯಪತ್ರ ಮಾಡಿಕೊಡದೇ ಸೇವಾನ್ಯೂನತೆ ಎಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಆದೇಶವಾದ 45 ದಿನಗಳೊಳಗೆ ಪೂರ್ಣ ಹಣ ಮರು ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(District Consumer Disputes Redressal Commission)ವು ಬೆಂಗಳೂರಿನ ಖಾಸಗಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್‌ನ ಪಾಲುದಾರರಿಗೆ ಆದೇಶಿಸಿದೆ.
ವಿನೋಬನಗರದ ವೆಂಕಟಲಕ್ಷ್ಮೀ ಎಂಬುವರು ದೂರುದಾರರು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು(Nelamangala Taluk) ಯಲಚಗೆರೆಯಲ್ಲಿ 5 ಲಕ್ಷ ರೂ.ಗೆ 40*20 ಅಳತೆಯ ನಿವೇಶನ ಖರೀದಿಸಿದ್ದರು. ಅದಕ್ಕಾಗಿ ಬೆಂಗಳೂರಿನ ಖಾಸಗಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್(Developers and Promoters)ಗೆ ಕಂತಿನ ರೂಪದಲ್ಲಿ 4.99 ಲಕ್ಷ ರೂ. ಅನ್ನು 2024ರ ಅಕ್ಟೋಬರ್‌ವರೆಗೆ ಪಾವತಿಸಿದ್ದರು. 6 ತಿಂಗಳೊಳಗೆ ಕ್ರಯಪತ್ರ ಮಾಡಿಕೊಡುತ್ತೇವೆಂದು ಹೇಳಿದ್ದ ಪಾಲುದಾರರು ಸತಾಯಿಸಿದ್ದರು.
2025ರಲ್ಲಿ ಲೀಗಲ್ ನೋಟಿಸ್(Legal Notice) ನೀಡಿದರೂ ಪ್ರತ್ಯುತ್ತರ ನೀಡಿರಲಿಲ್ಲ. ಈ ಬಗ್ಗೆ ವೆಂಕಟಲಕ್ಷ್ಮೀ ಆಯೋಗಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಆಯೋಗವು ಹಣ ಪಡೆದು ಕ್ರಯಪತ್ರ ಮಾಡಿಕೊಡದೆ ಸೇವಾನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿ ದೂರನ್ನು ಭಾಗಶಃ ಪರಿಸ್ಕರಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಸೇವಾನ್ಯೂನತೆ(Insubordination) ಪರಿಗಣಿಸಿ 4.99 ಲಕ್ಷ ರೂ.ಅನ್ನು ವಾರ್ಷಿಕ ಶೇ.9ರಂತೆ 2025ರ ಏ.2ರಿಂದ ಬಡ್ಡಿ ಸೇರಿಸಿ ಆದೇಶವಾದ 45 ದಿನಗಳೊಳಗೆ ಪೂರ್ಣ ಹಣವನ್ನು ದೂರುದಾರರಾದ ವೆಂಕಟಲಕ್ಷ್ಮೀ ಅವರಿಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ.12ರ ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಬೇಕು ಎಂದು ಆದೇಶಿಸಿದೆ.
ಅಲ್ಲದೆ, ಮಾನಸಿಕ ಹಿಂಸೆ(Psychological violence) ಮತ್ತು ಅನಾನುಕೂಲತೆಗೆ ಪರಿಹಾರವಾಗಿ 50 ಸಾವಿರ ರೂ. ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ 10 ಸಾವಿರ ರೂ. ಅನ್ನು ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ.10ರ ಬಡ್ಡಿ ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕೆಂದು ಸೂಚಿಸಿದೆ.