ಶಿರಾಳಕೊಪ್ಪದಲ್ಲಿ ಶ್ರೀ ದುರ್ಗಾ ದೇವಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿ, ಮಂಚಿ ಶಿವಣ್ಣ ಇತರರಿದ್ದರು. 
ಶಿವಮೊಗ್ಗ

ಎಲ್ಲರ ಸಹಕಾರದಿಂದ ದೇವಾಲಯ ನಿರ್ಮಾಣ

ಶಿರಾಳಕೊಪ್ಪ: ದೇಶದಲ್ಲಿ ಅಧ್ಯಾತ್ಮ, ಸಂಪ್ರದಾಯಗಳು ಪ್ರಬಲವಾಗಿ ಬೇರೂರಿವೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀ ದುರ್ಗಾದೇವಿ ನೂತನ ದೇವಸ್ಥಾನದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ದುರ್ಗಾದೇವಿ ದೇವಸ್ಥಾನ ನಿರ್ಮಾಣ ಆಗುತ್ತಿರುವುದು ವಿಶೇಷ. ಎಲ್ಲ ಸಮುದಾಯಗಳ ಸಹಕಾರದಿಂದ ದೇವಾಲಯ ನಿರ್ಮಿಸೋಣ ಎಂದು ತಿಳಿಸಿದರು.
ಬಳ್ಳಿಗಾವಿ ಗ್ರಾಮದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರ ಸಹಕಾರದಿಂದ ಅಲ್ಲಮಪ್ರಭುಗಳ ಪಾಲಕರು ವಾಸವಿದ್ದ ಸ್ಥಳವನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಅಕ್ಕಮಹಾದೇವಿ ಪೂಜೆ ಸಲ್ಲಿಸಿದ ಪರದೇಶಿ ಮಲ್ಲಪ್ಪನ ಕಟ್ಟೆ ಅಭಿವೃದ್ಧಿ ಆಗಬೇಕಿದೆ. ಶಿರಾಳಕೊಪ್ಪ ಸುತ್ತಮುತ್ತ ಶರಣರ ಪವಿತ್ರ ಸ್ಥಳ ಹಾಗೂ ದೇವಸ್ಥಾನ ಅಭಿವೃದ್ಧಿ ಆಗುತ್ತಿರುವುದರಿಂದ ಈ ಪ್ರದೇಶ ಆಧ್ಯಾತ್ಮಿಕ ಸರ್ಕ್ಯೂಟ್ ಆಗಲಿದೆ ಎಂದರು.
ವಿರಕ್ತಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಮಂಚಿ ಶಿವಣ್ಣ ನೂತನ ದೇವಸ್ಥಾನ ನಿರ್ಮಾಣ ಕುರಿತು ಮಾಹಿತಿ ನೀಡಿದರು. ಅಗಡಿ ಅಶೋಕ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ ಚನ್ನವೀರಶೆಟ್ಟಿ, ಎಚ್.ಎಂ.ಚಂದ್ರಶೇಖರ್, ನಿವೇದಿತಾ ರಾಜು, ಮಂಜ್ಯಾನಾಯ್ಕ, ಪದ್ದಣ್ಣ, ಕಾಳಿಕಾಂಬಾ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ಇತರರಿದ್ದರು.