ಸಾಗರದಲ್ಲಿ ನಿರ್ಮಿಸುತ್ತಿರುವ ಫುಡ್ ಕೋರ್ಟ್ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಎಚ್.ಕೆ.ನಾಗಪ್ಪ, ಸುರೇಶ್ ಬಾಬು, ಸೋಮಶೇಖರ ಲ್ಯಾವಿಗೆರೆ, ಮಧುಮಾಲತಿ ಇತರರಿದ್ದರು.
ಸಾಗರ: ನಿಯಮಬದ್ಧವಾಗಿ ಬೀದಿಬದಿ ವ್ಯಾಪಾರಿಗಳು ನಡೆದುಕೊಳ್ಳಬೇಕು. ಮನಬಂದಂತೆ ಎಲ್ಲೆಂದರಲ್ಲಿ ಅಂಗಡಿ ಹಾಕಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ಉದ್ದಿಮೆ ನಿಧಿಯಿಂದ ನಿರ್ಮಿಸುತ್ತಿರುವ ಫುಡ್ ಕೋರ್ಟ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸಾಗರ ಕ್ಷೇತ್ರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸಾಗರ ಪ್ರವಾಸಿ ತಾಣದ ಬಗ್ಗೆ ಅಭಿಮಾನ ಬರುವಂತೆ ಸಾಗರ ನಗರ ನಿರ್ಮಾಣ ಆಗಬೇಕು ಎಂದು ತಿಳಿಸಿದರು.
ಪಟ್ಟಣದ ಮೂರು ಭಾಗಗಳಲ್ಲಿ ಫುಡ್ ಕೋರ್ಟ್ ನಿರ್ಮಿಸುತ್ತಿದ್ದು, ಶಿವಮೊಗ್ಗ ರಸ್ತೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ 15 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಗಣಪತಿ ಕೆರೆ ಪಕ್ಕದ ಶಾಶ್ವತ ಧ್ವಜಸ್ತಂಭದ ಬಳಿ ಫುಡ್ ಕೋರ್ಟ್ ಜತೆ ಉದ್ಯಾನವನ, ಮಕ್ಕಳ ಆಟಿಕೆ, ಕಾರಂಜಿ ನಿರ್ಮಿಸಲು 2.60 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಹಳೇ ಬಸ್ ನಿಲ್ದಾಣದಲ್ಲಿ ಫುಡ್ ಕೋರ್ಟ್, ವೆಜ್, ನಾನ್ ವೆಜ್ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಶೌಚಗೃಹ ನಿರ್ಮಿಸಲಾಗುತ್ತಿದೆ ಎಂದರು.
ಒಳಾಂಗಣ ರಂಗಮಂದಿರಕ್ಕೆ 9 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಮೀನು ಮಟನ್ ಮಾರ್ಕೆಟ್ ಅಭಿವೃದ್ಧಿಗೆ 1.30 ಕೋಟಿ ರೂ. ಮಂಜೂರಾಗಿದೆ. ನಗರವ್ಯಾಪ್ತಿ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ, ಯೋಜನಾ ಪ್ರಾಧಿಕಾರದ ಸುರೇಶ್ ಬಾಬು, ಸೋಮಶೇಖರ ಲ್ಯಾವಿಗೆರೆ, ಮಧುಮಾಲತಿ, ಶಿವಾನಂದ್, ರಜನಿಕಾಂತ್, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅನ್ವರ್ ಬಾಷಾ, ಭವ್ಯಾ, ದಿನೇಶ್ ಇತರರಿದ್ದರು.