ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
- ಪೆಟ್ರೋಲ್‌ನ ಪ್ರತಿ ಲೀ.ಗೆ ಶೇ.1ರಷ್ಟು ಸೆಸ್ ಸಂಗ್ರಹಕ್ಕೆ ಮುಂದಾದ ಸರ್ಕಾರ
- ರಾಜ್ಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೂ ಈ ಸರ್ಕಾರದಲ್ಲಿ ಅನುದಾನವಿಲ್ಲ
- ಸರ್ಕಾರಕ್ಕೆ ಯಾರು ಸಲಹೆ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದು ವಿಜಯೇಂದ್ರ ಅಸಮಾಧಾನ
ಶಿವಮೊಗ್ಗ: ಕಾರ್ಮಿಕರ ಕಲ್ಯಾಣದ ನೆಪದಲ್ಲಿ ರಾಜ್ಯ ಸರ್ಕಾರ(State Government) ಕಾಂಗ್ರೆಸ್ಸಿಗರ ಕಲ್ಯಾಣಕ್ಕೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡೂವರೆಗೆ ವರ್ಷದಿಂದ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುತ್ತಿದೆ. ಇದೀಗ ಪೆಟ್ರೋಲ್‌ನ ಪ್ರತಿ ಲೀಟರ್‌ಗೆ ಶೇ.1ರಷ್ಟು ಸೆಸ್(Cess)ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಈ ಸರ್ಕಾರಕ್ಕೆ ಯಾವ ಪುಣ್ಯಾತ್ಮರು ಸಲಹೆ ನೀಡುತ್ತಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೂ ಈ ಸರ್ಕಾರದಲ್ಲಿ ಅನುದಾನವಿಲ್ಲ. ಬಿಜೆಪಿ ಸೇರಿ ನಾನಾ ಸಂಘಟನೆಗಳು ವಿರೋಧದಿಂದ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆಂಬ ಮಾಹಿತಿ ಇದೆ. ಉಳಿದಂತೆ ಬೇರೆ ಜಿಲ್ಲೆಗಳಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ದೂರಿದರು.